ಹದಗೆಟ್ಟಿದೆ ಬಿ.ಸಿ.ರೋಡ್ – ಕಲ್ಪನೆ – ಪೊಳಲಿ ರಸ್ತೆ
ಬಿ.ಸಿ.ರೋಡ್ : ಒಂದು ರಸ್ತೆ ಹದಗೆಟ್ಟರೆ ಅದರ ಪರಿಣಾಮ ಅನುಭವಿಸುವವರು ಹಾಗೂ ಕಷ್ಟ ಪಡುವವರು ದ್ವಿಚಕ್ರ ವಾಹನ ಸವಾರರು ಇಲ್ಲವೇ ತ್ರಿಚಕ್ರ ವಾಹನಗಳ ಸವಾರರು. ಆದರೆ ಈ ರಸ್ತೆಯಲ್ಲಿ ಸಂಚರಿಸಿದರೆ ಎಲ್ಲಾ ವಾಹನಗಳ ಸವಾರರೂ ಮತ್ತು ಪ್ರಯಾಣಿಕರೂ ನರಕಯಾತನೆ ಪಡುತ್ತಾರೆ. ಹಾಗಂತ ಇದು ವಾಹನಗಳ ಸಂಚಾರ ಕಡಿಮೆ ಇರುವ ರಸ್ತೆಯಲ್ಲ, ಇದೊಂದು ನಿರಂತರ ವಾಹನ ಸಂಚಾರ ಇರುವ ರಸ್ತೆ. ಅಷ್ಟೇ ಅಲ್ಲದೇ ಈ ರಸ್ತೆಯು ನಮ್ಮ ಜಿಲ್ಲೆಯ ಸುಪ್ರಸಿದ್ದ ತೀರ್ಥ ಕ್ಷೇತ್ರಗಳಿಗೆ ತೆರಳುವ ರಸ್ತೆಯಾಗಿದೆ. ಅದುವೇ ಬಿ.ಸಿ.ರೋಡು ಪೊಳಲಿ ರಸ್ತೆ.
ಬಿ.ಸಿ.ರೋಡ್ – ಪೊಳಲಿ ರಸ್ತೆ ಕೇವಲ ೧೩ ಕಿ.ಮೀ ಇದ್ದು, ರಸ್ತೆ ಅಗಲವಾಗಿದ್ದರೂ, ರಸ್ತೆಯ ಡಾಮರ್ ಮಾತ್ರ ಎಲ್ಲಾ ಕಡೆ ಕರಗಿ ಹೋಗಿದೆ. ಎಲ್ಲಿಯೂ ನೇರವಾಗಿ ರಸ್ತೆಯಲ್ಲಿ ಹೋಗುವಂತಿಲ್ಲ, ರಸ್ತೆಯ ಮಧ್ಯದಲ್ಲೇ ಅಲ್ಲಲ್ಲಿ ನಿರ್ಮಾಣವಾದ ಹೊಂಡಗಳನ್ನು ತಪ್ಪಿಸಿಕೊಂಡೇ ತೆರಳಬೇಕಾಗುತ್ತದೆ. ಜಿಲ್ಲೆಯಲ್ಲೇ ಇತಿಹಾಸ ಪ್ರಸಿದ್ದವಾಗಿರುವುದು ಪೊಳಲಿ ಶ್ರೀ ಕ್ಷೇತ್ರ, ಕಟೀಲು ಕ್ಷೇತ್ರ. ಈ ಕ್ಷೇತ್ರಗಳಿಗೆ ಬಂಟ್ವಾಳ ತಾಲೂಕು, ಬೆಳ್ತಂಗಡಿ ತಾಲೂಕು, ಪುತ್ತೂರು, ಕಡಬ ಹೀಗೆ ಈ ಎಲ್ಲ ತಾಲೂಕುಗಳಿಂದ ಬರುವ ಭಕ್ತಾದಿಗಳೆಲ್ಲರಿಗೂ ಬಿ.ಸಿ.ರೋಡು ಕೈಕಂಬ, ಕಲ್ಪನೆ ರಸ್ತೆ ಮುಖಾಂತರವೇ ಕ್ಷೇತ್ರಗಳಿಗೆ ತೆರಳಬೇಕಾಗುತ್ತದೆ.
ಅಪಾಯಕಾರಿ ರಸ್ತೆಯಾಗಿದೆ ಬೆದ್ರಗುಡ್ಡೆ ಜಂಕ್ಷನ್ : ಬಿ.ಸಿ.ರೋಡ್ ಕೈಕಂಬದಲ್ಲಿರುವ ಪೊಳಲಿ ಕ್ಷೇತ್ರ ಮಹಾದ್ವಾರದ ಬಳಿಯೇ ರಸ್ತೆಯಲ್ಲಿ ಹೊಂಡಗಳು ಆರಂಭವಾಗಿ ಮುಂದೆ ನಿರಂತರವಾಗಿ ಕಲ್ಪನೆ ತನಕ ಹೊಂಡಗಳದ್ದೇ ಕಾರುಬಾರಾಗಿದೆ. ಬೆದ್ರಗುಡ್ಡೆಯಲ್ಲಿ ವಾಹನ ಸಂಚಾರಕ್ಕೆ ಜಾಗವೇ ಇಲ್ಲ. ಇರುವ ಸ್ವಲ್ಪ ಜಾಗದಲ್ಲೇ ಎಲ್ಲಾ ವಾಹನಗಳು ಸಂಚರಿಸುತ್ತಿದೆ. ಮುಂದೆ ಹೋದರೆ ಬೆದ್ರಗುಡ್ಡೆ ತಿರುವು ಬಳಿ ಯಾವ ವಾಹನಗಳಿಗೂ ಸಂಚಾರ ಸುಗಮವಿಲ್ಲ. ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಹೆಚ್ಚಿನ ದ್ವಿಚಕ್ರ ವಾಹನಗಳು ಇನ್ನೊಂದು ಬದಿಯ ರಸ್ತೆಯನ್ನೇ ಅವಲಂಬಿಸುತ್ತಿದ್ದಾರೆ. ಆ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಗಂಟೆಗೇ ನೂರಾರು ವಾಹನಗಳು ಸಂಚಾರ ಮಾಡುತ್ತಿರುವಾಗ ಯಾವ ಭಾಗದಲ್ಲಿ ಹೋಗಬೇಕೇಂಬುದೇ ವಾಹನ ಸವಾರರಿಗೂ ಸಾರ್ವಜನಿಕರಿಗೂ ಸವಾಲಾಗಿದೆ.
ಹದಗೆಟ್ಟ ರಸ್ತೆ ಅಪಾಯಕಾರಿ : ಕೈಕಂಬದಿಂದಲೇ ರಸೆ ಅಗಲೀಕರಣವಾಗಿದ್ದರೂ, ಹೊಂಡಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಕೆಲವು ಕಡೆ ಅಪಾಯಕಾರಿ ಹೊಂಡಗಳಿವೆ. ಕೈಕಂಬದಿಂದ ಮುಂದುವರಿದು ಮೊಡಂಕಾಪು ರೈಲ್ವೇ ವೇ ಬ್ರಿಡ್ಜ್ ಅಡಿಯಲ್ಲಿ ದೊಡ್ಡ ಹೊಂಡವಾಗಿದೆ. ಈ ಭಾಗದಲ್ಲಿ ವಾಹನ ಸವಾರರಿಗೆ ಸಂಚಾರಕ್ಕೆ ಕೇವಲ ನಾಲ್ಕು ಫೀಟ್‌ನಷ್ಟು ಅಗದಲ್ಲಿರುವ ರಸ್ತೆ ಮಾತ್ರ ಇರುವುದು.
ಇನ್ನೂ ಮುಂದೆ ಹೋದರೆ ನಲ್ಕೆಮಾರ್ ಬಳಿ, ಪಚ್ಚಿನಡ್ಕ ಬಳಿ, ಕಳ್ಳಿಗೆ ತಿರುವು ಬಳಿ ಹೀಗೆ ಸಾಲು ಸಾಲಾಗಿ ದುರಾವಸ್ತೆಯೇ ವಾಹನಸವಾರರಿಗೆ ಗೋಚರಿಸುತ್ತದೆ.
ರಸ್ತೆ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಬಿಡುಗಡೆಯಾಗುತ್ತದೆ. ಆದರೆ ಕಾಮಗಾರಿಯ ಬಾಳ್ವಿಕೆ ಕೇವಲ ವರ್ಷಕ್ಕೆ ಸೀಮಿತವಾಗಿರುತ್ತದೆ. ಹೀಗಾದರೆ ಅದು ಸುಮ್ಮನೆ ನೀರಿನಲ್ಲಿ ಹೋಮ ಮಾಡಿದಂತಲ್ಲವೇ? ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಆಸ್ಥೆಯನ್ನು ವಹಿಸಬೇಕಾಗಿದೆ.
ಬಿ.ಸಿ.ರೋಡ್ – ಪೊಳಲಿ ರಸ್ತೆ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆ. ರಸ್ತೆಯುದ್ದಕ್ಕೂ ಹೊಂಡಗಳು ತುಂಬಿವೆ. ರಸ್ತೆ ಅಗಲವಾಗಿದ್ದರೂ ವಾಹನ ಸವಾರರಿಗೆ ಸುಗಮ ಸಂಚಾರ ಮರೀಚಿಕೆಯಾಗಿದೆ. ರೆ‘ಲ್ವೇ ಬ್ರಿಡ್ಜ್ ಬಳಿ ರಸ್ತೆಯಲ್ಲಿರುವ ಹೊಂಡ ಹಲವಾರು ತಿಂಗಳಿನಿಂದ ಇದ್ದರೂ ಯಾರೂ ಇತ್ತ ಕಡೆ ತಲೆ ಹಾಕಿಲ್ಲ.
- ಕಿಶೋರ್ ಬಂಗೇರ ಏರ್ಯ
ಬೆದ್ರಗುಡ್ಡೆ ಜಂಕ್ಷನ್ ಒಂದು ಅಪಾಯಕಾರಿ ಜಂಕ್ಷನ್ ಆಗಿ ಪರಿಣಮಿಸಿದೆ. ವಾಹನ ಸವಾರರಿಗೂ ತೊಂದರೆ ಹಾಗೂ ಸಾರ್ವಜನಿಕರಿಗೂ ರಸ್ತೆ ಬದಿಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ರಸ್ತೆಯಲ್ಲಿ ಹೊಂಡಗಳು ತುಂಬಿರುವುದರಿಂದ ಎಲ್ಲಾ ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುತ್ತಿದೆ. ಈ ‘ಗದಲ್ಲಿ ನಿರಂತರ ಅಪಘಾತಗಳು ಆಗುತ್ತಾ ಇರುತ್ತದೆ. ಆದಷ್ಟು ರಸ್ತೆಯನ್ನು ಸರಿಪಡಿಸಿದರೆ ಉತ್ತಮ.
- ನವೀನ್, ದುರ್ಗ ಗ್ಯಾರೇಜ್, ಬೆದ್ರಗುಡ್ಡೆ
ಬರಹ :ಯಾಧವ ಕುಲಾಲ್ ಅಗ್ರಬೈಲು