ಮುಡಾ ಹಗರಣ: ಬೆಂಗಳೂರಿನ ಬಿಲ್ಡರ್ ನಿವಾಸದ ಮೇಲೆ ಇಡಿ ದಾಳಿ

ಮುಡಾ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರಿಗೆ ಈ ಹುರುಳು ಸುತ್ತಿಕೊಂಡಂತೆ ಕಾಣುತ್ತಿದೆ. ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಓರ್ವ ಬಿಲ್ಡರ್ನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಇಡಿ ಅಧಿಕಾರಿಗಳ ಈ ದಾಳಿಯಿಂದ ರಾಜ್ಯ ಸರ್ಕಾರ ಇದೀಗ ತಲೆನೋವು ಶುರುವಾಗಿದೆ. ಇದೀಗ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಬಿಲ್ಡರ್ನ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 7-8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಇಡಿ ಅಧಿಕಾರಿಗಳು ಅಕ್ಟೋಬರ್ 18 ಮುಡಾ ಕಚೇರಿ ಸೇರಿದಂತೆ ಮೈಸೂರಿನ ಇತರ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ, ಇಡಿ ಅಧಿಕಾರಿಗಳು ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದರು.
ಇಡಿ ಅಧಿಕಾರಿಗಳು ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಆರ್ಟಿಐ ಕಾರ್ಯಕರ್ತ ಗಂಗರಾಜು ಇಂದು (ಅ.28) ಬೆಂಗಳೂರು ಇಡಿ ಕಚೇರಿಗೆ ತೆರಳಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ಇದೀಗ ಈ ಎಲ್ಲ ಘಟನೆಗಳು ಪ್ರಕರಣದ ಸತ್ಯಾಂಶದ ಬೆನ್ನತ್ತಿದೆ ಎಂದು ಕಾಣುತ್ತಿದೆ.



