ಕಂಚಿಲ ತೋಡಿಗೆ ತ್ಯಾಜ್ಯ ಎಸೆದು ಪರಾರಿ: ಗ್ರಾ.ಪಂ.ನಿರ್ಲಕ್ಷ್ಯ ಮುತ್ತಿಗೆ ಹಾಕಲು ಯತ್ನ
ಬಂಟ್ವಾಳ: ಸಜೀಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಎಂಬಲ್ಲಿ ನೀರು ಹರಿದು ಹೋಗುವ ತೋಡಿಗೆ ಕೇರಳ ರಾಜ್ಯದ ನೊಂದಣಿ ಹೊಂದಿದ ಎರಡು ಪಿಕಪ್ ನಲ್ಲಿ ಕೋಳಿ ಮತ್ತು ಗೋವಿನ ತ್ಯಾಜ್ಯ ಎಸೆಯಲಾಗಿರುವ ಅಂಶ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಘಟನೆ ಸೋಮವಾರ ನಡೆದಿದೆ.

ನೀರು ಹರಿಯುವ ತೋಡಿಗೆ ಕೋಳಿ ಮತ್ತು ಗೋವಿನ ತ್ಯಾಜ್ಯವನ್ನು ಲೋಡುಗಟ್ಟಲೇಯಲ್ಲಿ ತಂದು ಎಸೆಯುವುದರಿಂದ ಪರಿಸರವಿಡಿ ದುರ್ನಾತ ಬೀರುತ್ತಿದೆಯಲ್ಲದೆ ಈ ತ್ಯಾಜ್ಯಗಳು ನೇರವಾಗಿ ನೇತ್ರಾವತಿ ನದಿನೀರನ್ನು ಸೇರುತ್ತಿದ್ದು,ಪರಿಣಾಮ ನೀರು ಕೂಡ ಕಲುಷಿತಗೊಳ್ಳುತ್ತಿದೆ.ಇದೇ ನೀರನ್ನು ಮಂಗಳೂರು ಮಹಾನಗರ ಪಾಲಿಕೆಯಜನತೆ ಬಳಸುವಮನತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮೆಲ್ಕಾರ್ – ಮುಡಿಪು ( ಮಾಣಿ-ಉಳ್ಳಾಲ) ರಾಜ್ಯ ಹೆದ್ದಾರಿಯಲ್ಲಿ ಸಜೀಪ ಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಎಂಬಲ್ಲಿರುವ ಕಿರುಸೇತುವೆಯ ಅಡಿಭಾಗದಲ್ಲಿ ನೇತ್ರಾವತಿ ಒಡಲನ್ನು ಸೇರುವ ನೀರಿಗೆ ಕೇರಳ ರಾಜ್ಯದ ನೊಂದಣಿ ಹೊಂದಿದ ಎರಡು ಪಿಕಪ್ ಲೋಡ್ ಮಾಂಸ ತ್ಯಾಜ್ಯ ಗಳನ್ನು ಸೋಮವಾರ ಮುಂಜಾನೆ ಸುಮಾರು 2.30 ರ ಹೊತ್ತಿಗೆ ಡಂಪ್ ಮಾಡಿ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಂಗಳೂರು ದಸರಾ ಕಾರ್ಯಕ್ರಮ ಮುಗಿಸಿ ವಾಪಸು ಬರುತ್ತಿದ್ದ ಸ್ಥಳೀಯ ಯುವಕರು ಇದನ್ನು ಗಮನಿಸಿ ಪಿಕಪ್ ವಾಹನದಲ್ಲಿದ್ದವರನ್ನು ಪ್ರಶ್ನಿಸಿದಾಗ ಹಲ್ಲೆಗೆ ಮುಂದಾಗಿದ್ದು ಆಗ ಯುವಕರು ಮೊಬೈಲ್ ನಲ್ಲಿ ವಾಹನದ ಚಿತ್ರ ಸೆರೆಹಿಡಿದಿದ್ದಾರೆ.ಈ ವಿಚಾರವನ್ನು ಬೆಳಿಗ್ಗೆ ಇಲ್ಲಿನ ಗ್ರಾಮದ ಪ್ರಮುಖರಲ್ಲಿ ತಿಳಿಸಿದ್ದು, ತೋಡಿನಲ್ಲಿ ಪರಿಶೀಲಿಸಿದಾಗ ಲೋಡಿನಷ್ಟು ತ್ಯಾಜ್ಯದ ರಾಶಿ ಕಂಡು ಬಂದಿದೆ.ವಾಹನದ ಸಂಖ್ಯೆ ಸಹಿತ ಇಲ್ಲಿನ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದರೂ ಗ್ರಾ.ಪಂ.ಈ ಬಗ್ಗೆ ಯಾವುದೇ ಸ್ಪಂದನ ನೀಡಲಿಲ್ಲ ಎಂದುದುಇರಲಾಗಿದೆ.
ಈ ಹಿನ್ನಲೆಯಲ್ಲಿ ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಹಾಗೂ ಮಾಜಿ ಜಿ.ಪಂ. ಸದಸ್ಯ ರಾಧಕೃಷ್ಣ ಅಳ್ವ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮಪಂಚಾಯತ್ ಗೆ ಮುತ್ತಿಗೆ ಹಾಕಲು ಮುಂದಾದರು.
ಪರಿಸ್ಥಿತಿ ಕೈಮೀರುವ ಹಂತಕ್ಕೆ ಬರುತಿದ್ದಂತೆ ಪಂಚಾಯತ್ ಅಧಿಕಾರಿಗಳು ಕೂಡಲೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿ ದೂರನ್ನು ದಾಖಲಿಸಿದ್ದಾರೆ.
ಕಾನೂನು ಕ್ರಮ ಕ್ಕೆ ಅಳ್ವ ಆಗ್ರಹ:
ಮೆಲ್ಕಾರ್ ನಿಂದ ಮುಡಿಪು ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಕಂಚಿಲ ಸೇತುವೆಯ ಅಡಿಭಾಗದಲ್ಲಿ ಕೋಳಿ ಸಹಿತ ಗೋವಿನ ತ್ಯಾಜ್ಯಗಳನ್ನು ಎಸೆಯುವುದರಿಂದ ಇಲ್ಲಿನ ನಿವಾಸಿಗಳು ಕಳೆದೊಂದು ವರ್ಷದಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗ್ರಾಮಪಂಚಾಯತ್ ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ರಾಧಕೃಷ್ಣ ಆಳ್ಚ ಅಕ್ರೋಶವ್ಯಕ್ತಪಡಿಸಿದ್ದಾರೆ.
ನೀರು ಹರಿಯುವ ತೋಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಕೃಷಿ ಕುಟುಂಬಗಳು ವಾಸವಾಗಿದ್ದು, ಇದರಿಂದಾಗಿ ಮಾರಕ ರೋಗಗಳು ಬಾಧಿಸುವ ಆತಂಕವು ಉಂಟಾಗಿದ್ದು,
ಪ್ರಾಣಿಗಳು ಇದೇ ನೀರನ್ನು ಕುಡಿಯುವುದರಿಂದ ಜಾನುವಾರುಗಳಿಗೂ ರೋಗ ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಕೇವಲ ಮೂರು ಕಿ.ಮೀ ದೂರದಲ್ಲಿ ಈ ತೋಡಿನ ನೀರು ನೇತ್ರಾವತಿ ನದಿಯನ್ನು ಸೇರುತ್ತಿದ್ದು, ಇದೇ ಕೊಳೆತ ತ್ಯಾಜ್ಯದ ನೀರನ್ನು ಮಂಗಳೂರು ಜನತೆ ಕುಡಿಯಬೇಕಾಗಿದೆ ಎಂದು ಅವರು ಕಳವಳವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯದ ನೊಂದಣಿಯಿರುವ ವಾಹನಗಳಲ್ಲಿ ತ್ಯಾಜ್ಯಗಳನ್ನುತಂದು ಡಂಪ್ ಮಾಡುವ ವಾಹನದ ಸಂಖ್ಯೆಯನ್ನು ಗ್ರಾ.ಪಂ.ಗೆ ನೀಡಲಾಗಿದ್ದು, ಇದರ ವಿರುದ್ದ ಸುಇಕ್ತ ಕಾನೂನು ಕ್ರಮಕ್ಕು ಒತ್ತಾಯಿಸಲಾಗಿದೆ. ಮುಂದಿನ 24 ಗಂಟೆಯ ಒಳಗಾಗಿ ವಾಹನ ಹಾಗೂ ಚಾಲಕನ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ತ್ಯಾಜ್ಯ ಎಸೆದ ಆರೋಪಿಗಳಿಂದಲೇ ತೋಡನ್ನು ಸ್ವಚ್ಚಗೊಳಿಸಬೇಕು ಇಲ್ಲದಿದ್ದರೆ ಗ್ರಾಮಸ್ಥರು ಸೇರಿಕೊಂಡು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.