ಅ.19 ರಂದು ಸಿದ್ದಕಟ್ಟೆಯಲ್ಲಿ ರೋಟರಿಕಂಬಳ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಕ್ಕೆ ಮಾತ್ರ ಆದ್ಯತೆ
ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಓಟದ ಕೋಣಗಳಿಗೆ ಸಾಮಥ್ಯ೯ ಪ್ರದರ್ಶನಕ್ಕೆ ಸೂಕ್ತ ಅವಕಾಶ ನೀಡುವ ನಿಟ್ಟಿನಲ್ಲಿ ಅ. 19ರಂದು ಶನಿವಾರ ‘ರೋಟರಿ ಕಂಬಳ’ ನಡೆಸಲು ನಿರ್ಧರಿಸಲಾಗಿದೆ ಎಂದು ರೋಟರಿ ಹಿಲ್ಸ್ ಕ್ಲಬ್ಬಿನ ಸ್ಥಾಪಕಾಧ್ಯಕ್ಷ, ಕಂಬಳ ಕೋಣಗಳ ಯಜಮಾನ ಅವಿಲ್ ಮಿನೇಜಸ್ ಹೇಳಿದ್ದಾರೆ.

ತಾಲೂಕಿನ ಸಿದ್ಧಕಟ್ಟೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮತ್ತು ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ನಡೆಯುವ ಈ ಕಂಬಳ ಕೂಟದಲ್ಲಿ ಸುಮಾರು 100ಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸಲಿದ್ದು, ಕೇವಲ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ನಡೆಯುವ ಈ ಕಂಬಳ ಕೂಟವು ಶನಿವಾರ ಬೆಳಿಗ್ಗೆ ಗಂಟೆ 8.30ಕ್ಕೆ ಆರಂಭಗೊಂಡು ರಾತ್ರಿ ಗಂಟೆ 10.30ಕ್ಕೆ ಮುಕ್ತಾಯಗೊಳ್ಳಲಿದೆ.’ ಎಂದರು.
ಸಿದ್ಧಕಟ್ಟೆ ಕೊಡಂಗೆ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶ ಶಶಿಧರ ಶೆಟ್ಟಿ ಕಲ್ಲಾಪು, ವಾಮದಪದವು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಮತ್ತಿತರರು ಸಲಹೆ ನೀಡಿದರು.
ಅಧ್ಯಕ್ಷ ಕ್ಲಬ್ಬಿನ ಉಪಾಧ್ಯಕ್ಷ ವಿಜಯ ಫೆರ್ನಾಂಡೀಸ್, ಸದಸ್ಯರಾದ ಕೆ.ರಮೇಶ ನಾಯಕ್ ರಾಯಿ, ಪ್ರಭಾಕರ ಪ್ರಭು ಕರ್ಪೆ, ಮೋಹನ್ ಕೆ.ಶ್ರೀಯಾನ್ ರಾಯಿ, ಸ್ಥಳದಾನಿ ಚಂದ್ರಶೇಖರ ಕೊಡಂಗೆ, ಜನಾರ್ದನ ಬಂಗೇರ ಮತ್ತಿತರರು ಇದ್ದರು.
ಕ್ಲಬ್ಬಿನ ಕಾರ್ಯದರ್ಶ ರಾಜೇಶ ಶೆಟ್ಟಿ ಸೀತಾಳ ಸ್ವಾಗತಿಸಿ, ವಂದಿಸಿದರು.