ಕೈಕಂಬ: ಈಗಲೇ, ಈ ಕ್ಷಣವೇ ವಿದ್ಯುತ್ ಮಾರ್ಗದ ಕಾಮಗಾರಿ ಸ್ಥಗಿತಗೊಳಿಸಬೇಕು: ಅಲೆಮಾರಿ ಜನಾಂಗದ ಒಕ್ಕೂಟ
ಕೈಕಂಬ : ಪಡುಬಿದ್ರಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ ಉದ್ದೇಶಿತ 440ಕೆವಿ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ತಕ್ಷಣವೆ ಸ್ಥಗಿತಗೊಳಿಸಬೇಕು ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಗ್ರಹಿಸಿದ್ದಾರೆ.
ಕೆ. ರವೀಂದ್ರ ಶೆಟ್ಟಿ ವಿದ್ಯುತ್ ಮಾರ್ಗದ ಕಾಮಗಾರಿ ನಡೆಯುತ್ತಿರುವ ಕುಪ್ಪೆಪದವು ಸಮೀಪದ ಅಗರಿ ಚಂದಯ್ಯ ಜೋಗಿ ಎಂಬಲ್ಲಿ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿ ಅವರು, ಬಡ ವರ್ಗದ ಮನೆಯಿಂದ ಕೇವಲ 5ರಿಂದ 6 ಅಡಿ ಅಂತರದಲ್ಲಿ 440 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗುವುದರಿಂದ ಸಮಸ್ಯೆ ಎದುರಗಲಿದೆ. ಜಾಗದ ಮಾಲೀಕರ ಮತ್ತು ರೈತರ ಅನುಮತಿ ಪಡೆಯದೇ ಗುತ್ತಿಗೆದಾರ ಕಂಪನಿ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
440 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗಳು ಬಡ ಕುಟುಂಬದ ಮನೆ ಹತ್ತಿರದಿಂದಲೇ ಹಾದು ಹೋಗುವ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಈ ಕಾಮಗಾರಿ ನಡೆಸುತ್ತಿದ್ದಾರೆ. ಬಡ ಕುಟುಂಬಕ್ಕೆ ಇದರಿಂದ ಆಗುತ್ತಿರುವ ಅನ್ಯಾಯವನ್ನು ಒಕ್ಕೂಟ ಖಂಡಿಸುತ್ತದೆ ಅಲ್ಲದೇ ಇದರ ಬಗ್ಗೆ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬ್ಲ ಸಂತ್ರಸ್ತರ ಪರವಾಗಿ ರವೀಂದ್ರ ಶೆಟ್ಟಿಯವರಿಗೆ ಮನವಿಯನ್ನು ನೀಡಿ, ಯೋಜನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿ, ವಿದ್ಯುತ್ ಮಾರ್ಗ ಯೋಜನೆಗೆ ನಮ್ಮ ವಿರೋಧವಿಲ್ಲ ಆದರೆ, ರೈತರ ಜಾಗದ ಹೊರತಾಗಿ ಪರ್ಯಾಯ ಮಾರ್ಗದಲ್ಲಿ ಯೋಜನೆ ಅನುಷ್ಠಾನವಾಗಬೇಕು ಅಲ್ಲದೇ ಗುತ್ತಿಗೆದಾರ ಕಂಪನಿ ರೈತರನ್ನು ಬೆದರಿಸಿ, ದರ್ಪ, ಭಂಡತನದ ಮೂಲಕ ಕಾಮಗಾರಿ ನಡೆಸಲು ಮುಂದಾದರೆ ನಾವು ಬಿಡುವುದಿಲ್ಲ ಎಂದರು.
ಇನ್ನು ಈ ವೇಳೆ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಒಕ್ಕೂಟದ ದಕ್ಷಿಣ-ಕನ್ನಡ ಜಿಲ್ಲಾಧ್ಯಕ್ಷ ಡಾ. ಕೇಶವನಾಥ ಜೋಗಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದಕ್ಷಿಣ-ಕನ್ನಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು, ಸಂತ್ರಸ್ತರಾದ ಚಂದಯ್ಯ ಜೋಗಿ ಮತ್ತು ದಯಾನಂದ ಪೂಜಾರಿ ಕಂಗುರಿ ಇದ್ದರು.