ಮನೆಗೆ ಕಳ್ಳರ ಲಗ್ಗೆ: ನಗ-ನಗದು ದೋಚಿ ಪರಾರಿ
ಬಂಟ್ವಾಳ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮನೆಮಂದಿ ಮಸೀದಿಗೆ ತೆರಳಿರುವುದನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಂಚಿಯಲ್ಲಿ ನಡೆದಿದೆ.
ಮಂಚಿ ಗ್ರಾಮದ ಮೋಂತಿಮಾರು ನಿವಾಸಿ ಆಸ್ಮ ಎಂಬವರ ಮನೆಯಲ್ಲಿಈ ಕಳವು ಕೃತ್ಯ ನಡೆದಿದೆ.
ಸೆ.16 ರಂದು ಸೋಮವಾರ ಬೆಳಿಗ್ಗೆ ಈದ್ ಮಿಲಾದ್ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಲೆಂದು ಮನೆಮಂದಿ ಮನೆಗೆ ಬೀಗ ಹಾಕಿ ಮಸೀದಿಗೆ ತೆರಳಿದ್ದು,ರಾತ್ರಿ ಮಸೀದಿಯಿಂದ ವಾಪಸು ಮನೆಗೆ ಬಂದಾಗ ಈ ಕಳವು ಕೃತ್ಯ ಬಯಲಿಗೆ ಬಂದಿದೆ.
ಮನೆಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಆದರ ಮೂಲಕ ಮನೆಯೊಳಗೆ ಪ್ರವೇಶಿಸಿ, ಬೆಡ್ ರೂಮಿನಲ್ಲಿರುವ ಕಪಾಟು ಬೀಗ ತೆಗೆದು ಅದರಿದ್ದ 1.33 ಲ. ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು 25 ಸಾ.ರೂ.ವನ್ನು ಕಳವುಗೈದು ಕಳ್ಳರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುದ್ದಿ ತಿಳಿದು ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್. ಐ.ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.