ದೆಹಲಿಯ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಆಯ್ಕೆ
ದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಅತಿಶಿ ಮರ್ಲೆನಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಅತಿಶಿ ಮಾರ್ಲೆನಾ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೇಜ್ರಿವಾಲ್ ನಿವಾಸದಲ್ಲಿ ಸಭೆ ನಡೆದಿತ್ತು, ಈ ವೇಳೆ ಅನೇಕ ಹೆಸರು ಕೇಳಿ ಬಂದಿದೆ. ಆದರೆ ಸಭೆಯಲ್ಲಿ ಅತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದರು. ಇದಕ್ಕೆ ಇತರ ನಾಯಕರು ಬೆಂಬಲಿಸಿದ್ದಾರೆ.
ದೆಹಲಿಯ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಪಕ್ಷಕ್ಕೆ ಅಪಾರ ನಿಷ್ಠೆ ತೋರಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದರು. ಅವರನ್ನು ಸೆಪ್ಟೆಂಬರ್ 13 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ಸೆ.15ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಸಾರ್ವಜನಿಕರು ತೀರ್ಪು ನೀಡುವವರೆಗೂ ಸಿಎಂ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಹೇಳಿದ್ದರು.
ಈ ಕಾರಣಕ್ಕಾಗಿ ತಮ್ಮ ಅಧಿಕಾರವನ್ನು ಬಿಟ್ಟು ಅತಿಶಿ ಮರ್ಲೆನಾ ಅವರಿಗೆ ಅಧಿಕಾರ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೆನಾ ಮುಂದುವರಿಯಲಿದ್ದಾರೆ. ಹಾಗೂ ಇಂದು ಅವರ ಪದಗ್ರಹಣ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.