ತಲಪಾಡಿ ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ
ಬಂಟ್ವಾಳ:ಮಂಗಳೂರು- ಬೆಂಗಳೂರು ರಾ.ಹೆ.ಯ ತಲಪಾಡಿ ಬಳಿ ನಡೆದ ಭೀಕರ ಅಪಘಾತ ಸಂಭವಿಸಿದ ಸ್ಥಳಕ್ಕೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಅಗಮಿಸಿ ಅಪಘಾತಕ್ಕೆ ಕಾರಣಗಳ ಬಗ್ಗೆ ಅವಲೋಕನ ನಡೆಸಿದ್ದಾರೆ.

ರಾ.ಹೆ.ಯಲ್ಲಿ ಪ್ರತಿದಿನ ಎಂಬಂತೆ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳು ನಡೆಯುತ್ತಲೇ ಇರುತ್ತವೆ.ಆದರೆ ಕೆಲವೊಂದು ನಿರ್ದಿಷ್ಠ ಅಪಘಾತ ಘಟನೆಯ ಹೊರತು ಪಡಿಸಿ ಬಂಟ್ವಾಳದ ಮಟ್ಟಿಗೆ ಜಿಲ್ಲಾ ಎಸ್ಪಿಯವರು ಇದುವರೆಗೆ ಸ್ಥಳಕ್ಕೆ ಭೇಟಿ ನೀಡಿ ಕಾರಣಗಳನ್ನು ಅರಿತುಕೊಂಡಿರುವ ಉದಾಹರಣೆ ಕಡಿಮೆ.
ಸೆ.7 ರಂದು ತಲಪಾಡಿಯಲ್ಲಿ ನಡೆದ ಬೀಕರ ಅಪಘಾತದ ಗಂಭೀರತೆಯನ್ನು ಅರಿತುಕೊಂಡು ಎಸ್ಪಿಯವರೋರ್ವರು ಸ್ಥಳಕ್ಕೆ ಭೇಟಿ ನೀಡಿದ್ದು ಇದೇಮೊದಲು.
ಈ ಅಪಘಾತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಎರಡೇ ದಿನದಲ್ಲಿ ನವ ವಧು ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಅವರ ಪತ್ನಿ ಮಾನಸ ಸ್ಥಳದಲ್ಲೇ ಮೃತಪಟ್ಟರೆ,ಇವರ ಪತಿ ಅನಿಶ್ ಕೃಷ್ಣ ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಡಿವೈಡರನ್ನು ದಾಟಿ ಮತ್ತೊಂದು ಮಗ್ಗುಲಿಗೆ ಹಾರಿದ್ದು ಆಗ ಈರಸ್ತೆಯಲ್ಲಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿತ್ತು.ಇದೇ ಸ್ಥಳದಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳುವ ಕೆಲವಾಹನಗಳು ಟೋಲ್ ತಪ್ಪಿಸುವ ಭರದಲ್ಲಿ ಏಕಾಏಕಿ ಬಲಕ್ಕೆ ತಿರುಗುತ್ತವೆ.ಈ ಹಿನ್ನಲೆಯಲ್ಲಿಇಲ್ಲಿ ಸಾಕಷ್ಟ ಅಪಘಾತಗಳು ಸಂಭವಿಸಿದ ಉದಾಹರಣೆಯು ಇದೆ.
ಕೊನೆಗೂ ಇಲಾಖೆ ಈ ಅಪಘಾತದ ಬಳಿಕ ಎಸ್ಪಿಯಂತ ಹಿರಿಯ ಅಧಿಕಾರಿಗಳು ಎಚ್ಚೆತ್ತು ಘಟನೆಗೆ ಕಾರಣ, ಸಾಧ್ಯತೆಗಳ ಪ್ರಾಥಮಿಕ ಮಾಹಿತಿಗಳ ಕಲೆಹಾಕಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದಲು ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸಂದರ್ಭ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಆನಂತಪದ್ಮನಾಭ,ಶಿವಕುಮಾರ್,ಟ್ರಾಫಿಕ್ ಎಸ್.ಐ.ಸುತೇಶ್ ಹಾಜರಿದ್ದು,ಪೂರಕ ಮಾಹಿತಿ ನೀಡಿದರು.