ಬಿ.ಸಿ.ರೋಡು: ನಾಲ್ಕು ದಿನಗಳಕಾಲಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸಂಭ್ರಮದ ತೆರೆ,ವೈಭವಪೂರ್ಣ ಶೋಭಾಯಾತ್ರೆ
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಶ್ರಯದಲ್ಲಿ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳಕಾಲ ಆರಾಧಿಸಲ್ಪಟ್ಟ 45 ನೇ ವರ್ಷದ ಸಾರ್ವ ಜನಿಕ ಶ್ರೀಗಣೇಶೋತ್ಸವಕ್ಕೆ ಮಂಗಳವಾರ ಸಂಭ್ರಮದ ತೆರೆ ಬಿತ್ತು.
ಸಂಜೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಹಾಗೂ ಪದಾಧಿಕಾರಿಗಳು,ಸದಸ್ಯರು ಮತ್ತು ಭಕ್ತ ಸಮೂಹದ ಸಮ್ಮುಖದಲ್ಲಿ ವಿಸರ್ಜನಾ ಪೂಜೆ ನಡೆದು ಶ್ರೀ ಗಣೇಶನ ವೈಭವಪೂರ್ಣ ಶೋಭಾಯಾತ್ರೆ ಆರಂಭಗೊಂಡಿತು.
ಪೂಜಾಸ್ಥಳದಿಂದ ಹೊರಟ ಶ್ರೀಗಣೇಶನ ಶೋಭಾಯಾತ್ರೆ ರಾಷ್ಟ್ರೀಯ ಹೆದ್ದಾರಿ ರಾಜಮಾರ್ಗ ಕೈಕಂಬ,ತಲಪಾಡಿ ಗಣಪತಿಕಟ್ಟೆಯ ವರೆಗೆ ತೆರಳಿ ಅಲ್ಲಿಂದ ಅದೇ ದಾರಿಯಲ್ಲಿ ವಾಪಾಸ್ ಬಂದು ಬಿ.ಸಿ.ರೋಡು, ಮಯ್ಯರಬೈಲು,ಭಂಡಾರಿಬೆಟ್ಟು,ಬಂಟ್ವಾಳ ನೆರೆವಿಮೋಚನಾ ರಸ್ತೆಯಾಗಿ ಬಂಟ್ವಾಳ ಶ್ರೀವೆಂಕಟರಮಣ ದೇವಳದ ಮುಂಭಾಗದಲ್ಲಿರುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಗಮನ ಸೆಳೆಯುವ ಟ್ಯಾಬ್ಲೋ, ಸ್ತಬ್ದಚಿತ್ರ, ಬಿ.ಸಿ.ರೋಡಿನ ಚಿಲಿಪಿಲಿಗೊಂಬೆ ಕುಣಿತ,ಕೀಲುಕುದುರೆ, ಹುಲಿವೇಷ ಕುಣಿತದ ಅಬ್ಬರ,ಮಕ್ಕಳ ಕುಣಿತ ಭಜನೆ,ನಾಸಿಕ್ ಬ್ಯಾಂಡ್ ,ಚೆಂಡೆ, ವಿವಿಧ ವಾದ್ಯಗೋಷ್ಠಿಗಳ ಭರಾಟೆ,ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.
ಸಮಿತಿ ಪದಾಧಿಕಾರಿಗಳು,ಕಾರ್ಯಕರ್ತರು,ವಿವಿಧ ಹಿಂದೂಪರ ಸಂಘಟನೆಯ ಪ್ರಮುಖರು ಹಾಜರಿದ್ದರು.
ಎಳ್ಳುಂಡೆಯ ಹಾರ
ಬಿ.ಸಿ.ರೋಡಿನ ಕೈಕಂಬ ಶ್ರೀರಾಮ ಗೆಳೆಯ ಬಳಗ,ಅಯ್ಯಪ್ಪ ಭಕ್ತವೃಂದದಿಂದ ಎಳ್ಳುಂಡೆಯ ಬೃಹದಾಕಾರದ ಮಾಲೆಯನ್ನು ಶ್ರೀಗಣೇಶನಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ವರಣುನ ಕೃಪೆ ತೋರಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ಸೇರಿದ್ದು,ಶೋಭಾಯಾತ್ರೆಯನ್ನು ಕಣ್ತಂಬಿಕೊಂಡರು.