ಎಸ್.ವಿ.ಎಸ್‌ನಲ್ಲಿ ಪದವಿ ಪೂರ್ವ ವಿಭಾಗದ ಶಟಲ್ ಬ್ಯಾಡ್ಮಿಂಟನ್
ಬಂಟ್ವಾಳ : ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಏಕಾಗ್ರತೆಯನ್ನು ಗಳಿಸಿ ಅವರ ಶೈಕ್ಷಣಿಕ ಸಾಧನೆಗಳಲ್ಲೂ ಮಿಂಚಲು ಸಾಧ್ಯವಿದೆ ಎಂದು ಎಸ್.ವಿ.ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಯೋಗ ವರ್ಧನ್ ಡಿ.ಎಮ್ ಹೇಳಿದರು.

ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ(ರಿ) ಬಂಟ್ವಾಳ ಇವರ ಆಡಳಿತಕ್ಕೊಳಪಟ್ಟ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿ ಪೂರ್ವ ವಿಭಾಗದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮೂಹ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಪಂದ್ಯಾಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಸಂಯೋಜಕ ವಸಂತ್ ಗೌಡ. ಕೆ, ತೀರ್ಪುಗಾರರಾದ ಅಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್. ಬಿ ಸ್ವಾಗತಿಸಿದರು. ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಶಿಕ್ಷಣ ಸಂಸ್ಥೆಗಳ ಕ್ರೀಡಾ ಮೇಲ್ವಿಚಾರಕ ಮಹೇಶ್ ಶೆಟ್ಟಿ ವಂದಿಸಿದರು.
ಬಹುಮಾನ:
ಬಾಲಕರ ವಿಭಾಗದಲ್ಲಿ ತುಂಬೆ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರೆ,ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು (ಬಾಲಕಿಯರ ವಿಭಾಗ) ದ್ವಿತೀಯ ಸ್ಥಾನ ಪಡೆಯಿತು.
ಶ್ರೀ ರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ (ಬಾಲಕರ ವಿಭಾಗ), ವಿಠ್ಠಲ ಪದವಿ ಪೂರ್ವ ಕಾಲೇಜು ವಿಟ್ಲ (ಬಾಲಕಿಯರ ವಿಭಾಗ) ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.