ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಸರ್ಕಾರ, ಆದೇಶ ಉಲ್ಲಂಘಿಸಿದರೆ ದಂಡ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕರ್ನಾಟಕ ಸರ್ಕಾರ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ವರ್ಗೀಕರಿಸಲು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯು ರಾಜ್ಯಾದ್ಯಂತ ಅನ್ವಯಿಸುತ್ತದೆ ಮತ್ತು ಡೆಂಗ್ಯೂ ಹಾಗೂ ಇತರ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಒಳಗೊಂಡಿದೆ.
ಇನ್ನು ಇದಕ್ಕೆ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಆಸ್ತಿ ಮಾಲೀಕರು, ಬಿಲ್ಡರ್‌ಗಳು ಮತ್ತು ಯಾವುದೇ ಆವರಣಗಳಿಗೆ ಜವಾಬ್ದಾರರು-ಭೂಮಿ, ಕಟ್ಟಡಗಳು, ನೀರಿನ ಟ್ಯಾಂಕ್‌ಗಳು, ಉದ್ಯಾನಗಳು ಮತ್ತು ಆಟದ ಮೈದಾನಗಳು ಸೇರಿದಂತೆ- ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀರು ಸಂಗ್ರಹಿಸುವ ಪಾತ್ರೆಗಳು, ಸಂಪ್‌ಗಳು ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಘನತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಮತ್ತು ನೀರನ್ನು ಸಂಗ್ರಹಿಸಬಹುದಾದ ಖಾಲಿ ಪಾತ್ರೆಗಳು, ಕ್ಯಾನ್‌ಗಳು, ಬಳಕೆಯಾಗದ ಟೈರ್‌ಗಳು ಮತ್ತು ಇತರ ವಸ್ತುಗಳನ್ನು ತೆಗೆದುಹಾಕಬೇಕು. ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಬಳಕೆಯಾಗದ ತೊಟ್ಟಿಗಳು, ಹೊಂಡಗಳು ಅಥವಾ ಇತರ ಯಾವುದೇ ನೀರು-ನಿಶ್ಚಲ ಪ್ರದೇಶಗಳನ್ನು ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದೆ.
ಇನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಇತರ ಪ್ರದೇಶಗಳಲ್ಲಿನ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಗಳು ಈ ಬಗ್ಗೆ ಎಚ್ಚರಿಕೆ ಕ್ರಮಗಳು ವಹಿಸಬೇಕು ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ನಿಯಮಗಳ ಅನುಸರಣೆಯನ್ನು ಜಾರಿಗೊಳಿಸುವ ಅಧಿಕಾರವನ್ನು ನೀಡುತ್ತದೆ. ಇನ್ನು ಈ ಆದೇಶವನ್ನು ಪಾಲಿಸದಿದ್ದಾರೆ. ನಗರ ಪ್ರದೇಶದ ಕುಟುಂಬಗಳು ರೂ 400 ದಂಡ ಹಾಗೂ ಗ್ರಾಮೀಣ ಕುಟುಂಬಗಳಿಗೆ ರೂ 200 ದಂಡ ವಿಧಿಸಲಾಗುವುದು.