ಬಸ್ ಚಲಿಸುತ್ತಿದ್ದಾಗಲೇ ಪ್ರಜ್ಞೆ ತಪ್ಪಿದ ಚಾಲಕ, ನಿಯಂತ್ರಣ ತಪ್ಪಿ ಆಟೋ, ಕಾರು, ಬೈಕ್‌ಗೆ ಡಿಕ್ಕಿ

ಮಂಗಳೂರಿನ ಹಂಪನಕಟ್ಟೆ ಬಳಿ ಗುರುವಾರ ಭೀಕರ ಅಪಘಾತವೊಂದು ನಡೆದಿದೆ. ಅಧಿಕ ರಕ್ತದೊತ್ತಡದಿಂದ ಚಾಲಕ ಪ್ರಜ್ಞೆ ತಪ್ಪಿ ಬಿದ್ದ ಪರಿಣಾಮ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಆಟೋರಿಕ್ಷಾ, ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಗಾಯಗೊಂಡವರನ್ನು ಜಪ್ಪು ಬಪ್ಪಲ್ ನಿವಾಸಿಗಳಾದ ಉಸ್ಮಾನ್, ರಮ್ಲಾ ಮತ್ತು ಅವರ ಮಗ ಮೊಹಮ್ಮದ್ ನಜಾಲ್ ಎಂದು ಗುರುತಿಸಲಾಗಿದೆ. ಉಸ್ಮಾನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಆಟೋರಿಕ್ಷಾದಲ್ಲಿ ಶಾಪಿಂಗ್ ಮಾಡಲು ಮಂಗಳೂರಿಗೆ ಬಂದಿದ್ದರು ಎಂದು ಹೇಳಲಾಗಿದೆ. ಪಿಟಿಸಿ ಬಸ್ ಬಲ್ಮಟ್ಟದಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಹೋಗುತ್ತಿದ್ದಾಗ ಚಾಲಕನಿಗೆ ರಕ್ತದೊತ್ತಡ ಉಂಟಾಗಿ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿ ನಿಂತಿದ್ದ ಆಟೋ, ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ಅಲ್ಲಿದ್ದ ಅಂಗಡಿಯ ಸಿಸಿಟಿವಿಯಲ್ಲಿ ಘಟನೆಯ ದಥಶ್ಯ ಸೆರೆಯಾಗಿದೆ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಆಟೊರಿಕ್ಷಾದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಸ್ಥಳಕ್ಕೆ ಕದ್ರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.