ಮಂಗಳೂರು: ಬಾಕಿ ವಸೂಲಿಗಾಗಿ ವಿಶೇಷ ಆಂದೋಲನ ಆರಂಭಿಸಿದ ಮೆಸ್ಕಾಂ

ಮಂಗಳೂರು: ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಮಾಡದ ಗ್ರಾಹಕರಿಂದ ಬಾಕಿ ವಸೂಲಿ ಮಾಡಲು ಸೆಪ್ಟೆಂಬರ್ 2 ರಿಂದ 30 ರವರೆಗೆ ವಿಶೇಷ ಅಭಿಯಾನವನ್ನು ನಡೆಸಲಿದೆ. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ತಮ್ಮ ವಿದ್ಯುತ್ ಬಿಲ್‌ಗಳನ್ನು ನಿಗದಿತ ಸಮಯದೊಳಗೆ ಪಾವತಿಸಬೇಕು ಎಂದು ಮೆಸ್ಕಾಂ ತಿಳಿಸಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಅವರು ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಹೊಸ ಅಭಿಯಾನಕ್ಕೆ ಅನುಕೂಲವಾಗುವಂತೆ ವಿಭಾಗೀಯ ಮತ್ತು ಉಪವಿಭಾಗ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಕಂದಾಯ ವಸೂಲಾತಿ ಪರಿಶೀಲನೆಯಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳು, ರಾಜ್ಯ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಕಾಲದಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸದಿರುವುದು ಮೆಸ್ಕಾಂಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂಬ ವಿಚಾರ ಕಂಡುಬಂದಿದೆ. ವಿದ್ಯುತ್ ಖರೀದಿ ವೆಚ್ಚಗಳು, ಆಡಳಿತಾತ್ಮಕ ವೆಚ್ಚಗಳು, ವಿದ್ಯುತ್ ಜಾಲದ ನಿರ್ವಹಣೆಗಾಗಿ ಗ್ರಾಹಕರು ನೀಡಬೇಕಾಗಿರುವ ಬಾಕಿ ಮೊತ್ತವನ್ನು ಅತೀ ಶೀಘ್ರದಲ್ಲಿ ವಸೂಲಿ ಮಾಡುವುದು ಅತ್ಯಗತ್ಯ ಎಂದು ಮೆಸ್ಕಾಂ ಹೇಳಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಮೆಸ್ಕಾಂ ಎಚ್ಚರಿಕೆ ನೀಡಿದೆ.