Published On: Sun, Sep 1st, 2024

ಮಂಗಳೂರು: ಪಂಚಾಯತಿಗಳಲ್ಲಿನ ಭ್ರಷ್ಟಾಚಾರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಸದಸ್ಯರೂ ಹೊಣೆಗಾರರು

ಮಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿನ ಅಕ್ರಮಗಳಿಗೆ, ಭ್ರಷ್ಟಾಚಾರಗಳಿಗೆ ರಾಜ್ಯ ಸರಕಾರವು ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಹೊಣೆಗಾರರನ್ನಾಗಿ ಮಾಡಿತ್ತು. ಆದರೆ, ಸರಕಾರ ಈಗ ಇಂತಹ ಹಗರಣಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಲು ಚಿಂತನೆ ನಡೆಸಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಮಾತ್ರ ಆಯವ್ಯಯ ಮತ್ತು ಬಜೆಟ್‌ಗೆ ಜಂಟಿ ಸಹಿ ಮಾಡಬೇಕಾಗುತ್ತದೆ. ಅವರ ಸಹಿಯ ನಂತರವೇ ಯಾವುದೇ ಕೆಲಸಕ್ಕೆ ಸರ್ಕಾರದಿಂದ ಹಣವನ್ನು ಹಂಚಲಾಗುತ್ತದೆ. ಆದರೆ, ಇಲಾಖಾ ಲೆಕ್ಕಪರಿಶೋಧನೆಗಳು ಹಗರಣಗಳನ್ನು, ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿದಾಗ ಅಲ್ಲಿ ಪಿಡಿಒಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಯಾವುದೇ ಸಂಕಷ್ಟಗಳನ್ನು ಎದುರಿಸುವುದಿಲ್ಲ.

ಈ ನಿಟ್ಟಿನಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿರುವ ಎಲ್ಲ ಪ್ರತಿನಿಧಿಗಳನ್ನು ಕೂಡಾ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡುವಂತೆ ಪಿಡಿಒ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯ ಸರ್ಕಾರ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾಯಿತ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿಸಲು ನಿಯಮಗಳನ್ನು ರೂಪಿಸುತ್ತಿದೆ. ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್ ಜುಲೈ 30 ರಂದು ಎಲ್ಲಾ ಸಿಇಒಗಳಿಗೆ ಸುತ್ತೋಲೆ ಹೊರಡಿಸಿದ್ದು, ತನಿಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದಲ್ಲಿ ಪಿಡಿಒಗಳು ಮಾತ್ರವಲ್ಲದೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಎಂಜಿನಿಯರ್‌ಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಕರ್ನಾಟಕದ 5,963 ಗ್ರಾಮ ಪಂಚಾಯಿತಿಗಳಲ್ಲಿ 91,437 ಚುನಾಯಿತ ಪ್ರತಿನಿಧಿಗಳು ಮತ್ತು 5,226 ಪಿಡಿಒಗಳು ಇದ್ದಾರೆ. ಕಳೆದ ಎರಡು ವರ್ಷಗಳಲ್ಲಿ 756 ಪಿಡಿಒಗಳು ಭ್ರಷ್ಟಾಚಾರದ ತನಿಖೆಗೆ ಒಳಗಾಗಿದ್ದಾರೆ. ಪಿಡಿಒ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಅನುದಾನ ನಿರ್ವಹಣೆಯಲ್ಲಿ ಗ್ರಾ.ಪಂ.ಅಧ್ಯಕ್ಷರಗಳು ಕೂಡಾ ಪಿ.ಡಿ.ಒ.ಗಳ ಜತೆ ಸಮಾನ ಹೊಣೆಗಾರಿಕೆ ಹೊಂದಿದ್ದು, ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದಂತೆ ಪಂಚಾಯಿತಿ ಅಧ್ಯಕ್ಷರನ್ನು ಹೊಣೆಗಾರರನ್ನಾಗಿಸುವುದು ಸರಿಯಾದ ಕ್ರಮ’ ಎಂದು ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter