ಲೈಂಗಿಕ ದೌರ್ಜನ್ಯ ಆರೋಪ: ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್ ಐ ಆರ್ ದಾಖಲು

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ಎಫ್ಐಆರ್ ದಾಖಲಾಗಿದೆ. 47 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಫೋಟೋ, ಸೆಲ್ಫಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಅನಂತ ಭಟ್ ಅವರ ಪುತ್ರಿ ಮಂಗಳಾ ಅವರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅವರು ತಮ್ಮ ದೂರಿನಲ್ಲಿ “ನಾನು ಅರುಣ್ ಕುಮಾರ್ ಪುತ್ತಿಲ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರಭಾವಿತಳಾಗಿದ್ದು ಅವರ ಅಭಿಮಾನಿಯಾಗಿದ್ದೇನೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಬೆಂಬಲ ನೀಡುತ್ತಿದ್ದೆ. 2023ರ ಜೂನ್ ಮೊದಲ ವಾರದಲ್ಲಿ ಬೆಂಗಳೂರಿನ ಹೋಟೆಲ್‌ಗೆ ಬರುವಂತೆ ಹೇಳಿ ಲೈಂಗಿಕ ಕಿರುಕುಳ ನೀಡಿದ್ದರು. ಬಳಿಕ ಬ್ಲಾಕ್ ಮೇಲ್ ಮಾಡಿ ಎಲ್ಲಿಗೆ ಹೋದರೂ ಕರೆ ಮಾಡುತ್ತಿದ್ದರು. ನನ್ನ ಮಗಳಿಗೆ ಜೀವನದುದ್ದಕ್ಕೂ ಎಲ್ಲವನ್ನೂ ಒದಗಿಸುತ್ತೇನೆ ಎಂದು ಭರವಸೆ ನೀಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನನ್ನನ್ನು ಶೋಷಿಸಿದರು. ಅರುಣ್ ಜೊತೆಯಲ್ಲಿದ್ದಾಗ ಫೋಟೋ, ಸೆಲ್ಫಿ, ಆಡಿಯೋ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಸಿ ತನ್ನ ಕೆಲಸ ಮಾಡಿಕೊಳ್ಳುತ್ತಿದ್ದ. 2024ರ ಲೋಕಸಭಾ ಚುನಾವಣೆಯ ನಂತರ ಅವರು ನನ್ನ ಸಂಪರ್ಕವನ್ನು ಕಡಿಮೆ ಮಾಡಿದರು. ಈಗ ನನ್ನ ಬಳಿ ಬಾಡಿಗೆ ಕಟ್ಟಲು ಹಣವಿಲ್ಲ ಮತ್ತು ಕೆಲಸವೂ ಇಲ್ಲ.” ಎಂದು ತಿಳಿಸಿದ್ದಾರೆ
ಮಹಿಳೆಯ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಪುತ್ತಿಲ, ” ನನ್ನ ವಿರುದ್ಧ ಮಹಿಳೆ ಮಾಡಿರುವ ಸುಳ್ಳು ಆರೋಪಗಳು. ಇದೊಂದು ಪೂರ್ವ ಯೋಜಿತ ಕೃತ್ಯವೆಂಬಂತೆ ತೋರುತ್ತಿದೆ. ಈ ಸಂಚಿನಲ್ಲಿ ರಾಜಕೀಯ ಸೇಡಿನ ಹುನ್ನಾರವೂ ಸೇರಿಕೊಂಡಿರುವುದು ಕಂಡುಬರುತ್ತದೆ. ಯಾವುದೇ ಆರೋಪ ಸತ್ಯವಾಗಿರಬೇಕು. ಇದು ದೇವರನ್ನು ಮೆಚ್ಚಿಸುವ ವಿಷಯವಲ್ಲ. ಅವನು ಎಲ್ಲವನ್ನೂ ನಿರ್ಧರಿಸುತ್ತಾನೆ. ” ಎಂದಿದ್ದಾರೆ.