ಮಂಗಳೂರು : ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಅನುಮತಿ ನೀಡಿದ್ದನ್ನು ಖಂಡಿಸಿ ರಿಕ್ಷಾ ಚಾಲಕರ ಪ್ರತಿಭಟನೆ

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಅನುಮತಿ ನೀಡಿರುವ ಜಿಲ್ಲಾಡಳಿತದ ನಿರ್ಧಾರವನ್ನು ವಿರೋಧಿಸಿ ಆಟೋ ರಿಕ್ಷಾ ಚಾಲಕರು ತಮ್ಮ ಸಂಘಟನೆಗಳ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದರು. ಆಟೊರಿಕ್ಷಾ ಚಾಲಕರು ನಗರದ ಜ್ಯೋತಿ ಸರ್ಕಲ್‌ನಿಂದ ಮೆರವಣಿಗೆಯಿಂದ ಕ್ಲಾಕ್ ಟವರ್ ವರೆಗೆ ಮೆರವಣಿಗೆ ನಡೆಸಿದರು.
ಈ ವೇಳೆ ಯಲ್ಲಿ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಎಲೆಕ್ಟ್ರಿಕ್ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅನುಮತಿ ನೀಡಿರುವ ಜಿಲ್ಲಾಧಿಕಾರಿ ಆದೇಶವು ಏಕಪಕ್ಷೀಯವಾಗಿದೆ. ಈ ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ. ಈ ಆದೇಶವು ಹೊಟ್ಟೆಪಾಡಿಗಾಗಿ ದುಡಿಯುವ ರಿಕ್ಷಾ ಚಾಲಕರ ಬದುಕಿಗೆ ಕೊಳ್ಳಿ ಇಟ್ಟಂತೆ ಆಗಿದೆ. ಡಿಸಿ ಸ್ಥಳಕ್ಕೆ ಬರಬೇಕು ಅಥವಾ ಅವರು ಅಧಿಕೃತ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದರು
‘ಕೇಂದ್ರ ಸರ್ಕಾರದ ನಿರ್ಧಾರ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಾರೆ, ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ನೆರೆಯ ಜಿಲ್ಲೆಯಾದ ಉಡುಪಿಯಲ್ಲಿ ಈ ಆದೇಶವು ಜಾರಿಗೊಳಿಸಲಾಗಿಲ್ಲ. ಜಿಲ್ಲಾಡಳಿತವು ಈ ಎಲೆಕ್ಟ್ರಿಕ್ ಆಟೋ ರಿಕ್ಷಾ ಪೂರೈಕೆ ಕಂಪನಿಯೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಆರೋಪ ಮಾಡಿದರು.
ಈ ವೇಳೆಯಲ್ಲಿ ಸಂಘಟನೆ ಪ್ರಮುಖರಾದ ಅಶೋಕ ಶೆಟ್ಟಿ, ಭರತ್, ಮುಹಮ್ಮದ್ ಅನ್ಸಾರ್, ಲೋಕೇಶ್ ಬಲ್ಲಾಳ್ ಬಾಗ್ ಮತ್ತಿತರರು ಇದ್ದರು. ಈ ಚಾಲಕರು ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಹ ಸ್ಥಿತಿಯೂ ನಿರ್ಮಾಣವಾಯಿತು. ಕೆಲವೇ ಕೆಲವು ಎಲೆಕ್ಟ್ರಿಕ್ ರಿಕ್ಷಾಗಳು ಸಂಚರಿಸುತ್ತಿರುವುದು ನಗರದಲ್ಲಿ ಕಂಡು ಬಂದಿತು.