ಪೊಳಲಿ ಸೇತುವೆ ಬಂದ್: ಜಿಲ್ಲಾಧಿಕಾರಿಗೆ ಕಾದು ಕಾದು ಸುಸ್ತಾದ ಜನ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ
ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಯಾವುದೇ ಸೂಚನೆ ಹಾಗೂ ಮಾಹಿತಿ ಇಲ್ಲದೆ ಏಕಾಏಕಿಯಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಅದು ಜಿಲ್ಲಾಧಿಕಾರಿ ಅವರ ಆದೇಶ ಎಂದು ಸ್ಥಳೀಯ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ . ಅನೇಕರಿಗೆ ಈ ಸೇತುವೆಯೇ ಸಂಚಾರಕ್ಕೆ ಆಧಾರವಾಗಿದೆ. ಈಗ ಇದನ್ನೇ ಬಂದ್ ಮಾಡಿದ್ದಾರೆ. ಸೇತುವೆ ಬಿರುಕುಗೊಂಡಿರುವ ಕಾರಣ ಘನ ವಾಹನಗಳು ಸಂಚಾರಿಸದಂತೆ ಈ ಸೇತುವೆಯನ್ನು ಬಂದ್ ಮಾಡಲಾಗಿದೆ. ಆದರೆ ಇದಕ್ಕೆ ಒಂದು ಪರ್ಯಾಯ ವ್ಯವಸ್ಥೆ ಬೇಕಲ್ವ, ಅದನ್ನು ಮಾಡಿ ಎಂದು ಸಾರ್ವಜನಿಕರ ಆಗ್ರಹವಾಗಿತ್ತು. ಇದಕ್ಕಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂದು ಸಾರ್ವಜನಿಕರ ಜತೆಗೆ ಮಾತನಾಡಲು ಸ್ಥಳಕ್ಕೆ ಬರುವುದಾಗಿ ಹೇಳಿದರು. ಡಿಸಿ ಬರುವಿಕೆಗಾಗಿ ಕಾದು ಕಾದು ಅಲ್ಲಿನ ಜನ ಸುಸ್ತಾಗಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಸಂಜೆಯಿಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈಗ ಬರುತ್ತಾರೆ ಮತ್ತೆ ಬರುತ್ತಾರೆ ಎಂದು ಜನ ಕಾದ್ದದೇ ಆಯಿತು. ಸೇತುವೆ ಬಂದ್ ಮಾಡಿರುವುದರಿಂದ ಎಷ್ಟು ಸಮಸ್ಯೆ ಆಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದೀಗ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಾಲ್ಕು ದಿನದೊಳಗೆ ಇದಕ್ಕೆ ಪರಿಹಾರ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಅಲ್ಲಿನ ಜನ ಪಕ್ಷ ಭೇದ ಮರೆತು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸ್ಥಳದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸಹಿತ ವಿವಿಧ ಇಖಾಧಿಕಾರಿಗಳು ಇದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೇ ಖುದ್ದು ಸೇತುವೆಯ ವಸ್ತುಸ್ಥಿತಿ ಪರಿಶೀಲಿಸಲು ಅಗಮಿಸಲಿದ್ದಾರೆಂದು ಬಂಟ್ವಾಳ ತಹಶೀಲ್ದಾರ್ ಹೇಳಿದ ಕಾರಣ ಪೊಳಲಿ, ಅಡ್ಡೂರು ಅಸುಪಾಸಿನ ನಾಗರಿಕರು, ಪ್ರಮುಖರು ಸ್ಥಳದಲ್ಲಿ ಜಮಾಯಿಸಿದ್ದರು.ಆದರೆ ಜಿಲ್ಲಾಧಿಕಾರಿಯವರು ಮಾತ್ರ ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು.
ತಂತ್ರಜ್ಞರ ತಂಡವೊಂದು ಮತ್ತೆ ಅಗಮಿಸಿ ಪರಿಶೀಲಿಸಲಿದೆ ಎಂದು ಅಧಿಕಾರಿಗಳು ನಾಗರಿಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಮುಂದಿನ ನಾಲ್ಕು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ಸ್ಥಳೀಯರು ನೀಡಿದರು. ಪೊಳಲಿ ಸೇತುವೆಯನ್ನು ಗಮನಿಸಿದಾಗ ಎಲ್ಲ ಪಿಲ್ಲರ್ ಗಳು ಸದೃಢವಾಗಿದ್ದು ಇನ್ನೂ ನೂರು ವರ್ಷ ಬಾಳಿಕೆ ಬರುವಂತೆ ಕಂಡು ಬರುತ್ತಿವೆ. ಆದರೆ ಪಿಲ್ಲರ್ ಗಳ ಮೇಲಿರುವ ಗರ್ಡರ್ ಗಳು ಸಂಪೂರ್ಣ ಶಿಥಿಲಗೊಂಡಿವೆ. ತುಕ್ಕು ಹಿಡಿದಿರುವ ಗರ್ಡರ್ ಗಳು ಬದಲಾವಣೆ ನಡೆಯಬೇಕೇ ಹೊರತು ಹೊಸ ಸೇತುವೆ ಅನಿವಾರ್ಯವಲ್ಲ ಸೇತುವೆಯ ಪಿಲ್ಲರ್‌ಗಳು ಸಾಕಷ್ಟು ಶಕ್ತಿಶಾಲಿಯಾಗಿವೆ ಅಡ್ಡೂರು ಮತ್ತು ಪೊಳಲಿ ನಾಗರಿಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಪುತ್ತೂರು: ಮುಸ್ಲಿಂ ವಿದ್ಯಾರ್ಥಿನಿಗೆ ಚೂರಿಯಿಂದ ಇರಿದ ಹಿಂದೂ ವಿದ್ಯಾರ್ಥಿ
ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ ಕರಿಯಂಗಳ ಅವರು ಒಂದು ಸೇತುವೆ ಬಂದ್ ಮಾಡಿರುವುದರಿಂದ ಕೆಲಸಕ್ಕೆ ಹೋಗುವವರಿಂದ ಹಿಡಿದು ಶಾಲಾ ಕಾಲೇಜಿಗೆ ಹೋಗುವವರಿಗೂ ತೊಂದರೆ ಆಗುತ್ತಿದೆ. ಡಿಸಿ ಬರುತ್ತಾರೆ, ನಮ್ಮ ಮನವಿಯನ್ನು ಅವರಿಗೆ ನೀಡಬೇಕು, ಇದಕ್ಕೆ ಅವರು ಒಂದು ಪರಿಹಾರ ನೀಡುತ್ತಾರೆ, ಎಂಬ ಭರವಸೆ ಇತ್ತು. ಆದರೆ ಅದನ್ನು ಜಿಲ್ಲಾಧಿಕಾರಿ ನಿರಾಸೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇವರ ಜತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಕರಿಯಂಗಳ ಕೂಡ ಇದ್ದರು.
ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ಎಲ್ಲರಿಗೂ ತೊಂದರೆ ಆಗಿದೆ. ಪೊಲೀಸ್ ಆಯುಕ್ತರು ಕೂಡ ಭರವಸೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಹೇಳಿದ್ದರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಯು. ಪಿ ಇಬ್ರಾಹಿಂ ಅಡ್ಡೂರು ಹೇಳಿದರು.
ಸಾರ್ವಜನಿಕರಿಗೆ ತಿಳಿಸದೆ. ವಾಹನ ಸಂಚಾರ ನಿಷೇಧ ಎಂಬ ಬೋರ್ಡ್ ಹಾಕಿದ್ದಾರೆ. ಇದು ಸರಿಯಲ್ಲ, ಪೊಳಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಬಿಜೆಪಿ ಸಜಿಪ ಮುನ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ್ ನಾವಡ ಪೊಳಲಿ ಹೇಳಿದರು.
ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕೆಂದು ಮನವಿ
ದ.ಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಅವರ ಜೊತೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಅದಲ್ಲದೇ, ತಜ್ಞರ ತಂಡದಿಂದ ಸೇತುವೆಯ ದೃಢತೆಯ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲಾಯಿತು. ಈ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಅಮರನಾಥ ಜೈನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಸೇರಿದಂತೆ ಇನ್ನಿತ್ತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.