ಮಂಗಳೂರು: ಫುಟ್ಬಾಲ್ ಪಂದ್ಯದ ಕಿರಿಕ್, ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಾಣಾಂತಿಕ ಹಲ್ಲೆ

ಫುಟ್ಬಾಲ್ ಆಟದ ವಿಚಾರವಾಗಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ತಂಡದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯೊಂದು ಮಂಗಳೂರು ನಗರದ ಮಹಾಕಾಳಿ ಪಡ್ಪು ಬಳಿ ನಡೆದಿದೆ. ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಕಳೆದ ಆ.14ರಂದು ಯೆನಪೋಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಫುಟ್ಬಾಲ್ ಟೂರ್ನಮೆಂಟ್ ನಡೆದಿತ್ತು. ಈ ವೇಳೆ, ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜುನೈದ್ ಎಂಬವರು ಯೆನಪೋಯ ತಂಡಕ್ಕೆ ಬೆಂಬಲಿಸಿದ್ದರು. ಇದೇ ವಿಚಾರಕ್ಕೆ ಮತ್ತೊಂದು ತಂಡದ ವಿದ್ಯಾರ್ಥಿಗಳು ಇವರನ್ನು ಅಪಹರಿಸಿದ್ದಾರೆ.
ಆಗಸ್ಟ್ 19ರ ಸೋಮವಾರ ಸಂಜೆ ಈ ವಿದ್ಯಾರ್ಥಿಗಳನ್ನು ಪಾಂಡೇಶ್ವರದ ಫೋರಂ ಮಾಲ್ ಬಳಿಯಿಂದ ಕಾರಿನಲ್ಲಿ ಅಪಹರಿಸಿ, ಮಹಾಕಾಳಿ ಪಡ್ಪು ಎಂಬಲ್ಲಿಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಆ ಬಳಿಕ ವಿದ್ಯಾರ್ಥಿಗಳನ್ನು ಮಂಗಳೂರು ನಗರದ ಮೂರು ಕಡೆ ಕರೆದುಕೊಂಡು ಹೋಗಿ ಕ್ಷಮೆ ಕೇಳುವಂತೆ ಅರಬೆತ್ತಲೆಗೊಳಿಸಿ ಬಸ್ಕಿ ಹೊಡೆಸಿದ್ದಾರೆ. ಇದೇ ವೇಳೆಯಲ್ಲಿ ಹಿಗ್ಗಾಮುಗ್ಗವಾಗಿ ಹೊಡೆದು ಸಿಗರೇಟ್ ನಿಂದ ಸುಟ್ಟು ಹಲ್ಲೆ ಮಾಡಿದ್ದಾರೆ.
ದಿಯಾನ್, ಅನ್ನೈ, ತಸ್ಮಿನ್, ಸಲ್ಮಾನ್, ಅನಾಸ್ ಈ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಈ ಹಿನ್ನಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಇಬ್ಬರು ಆರೋಪಿಗಳಾದ ದಿಯಾನ್ ಮತ್ತು ಸಲ್ಮಾನ್ ರನ್ನು ಬಂಧಿಸಿದ್ದಾರೆ. ಈಗಾಗಲೇ ಮಂಗಳೂರಿನ ಪಾಂಡೇಶ್ವರ ಪೊಲೀಸರಿಂದ ಪ್ರಕರಣ ತನಿಖೆ ನಡೆಸುತ್ತಿದ್ದು, ಉಳಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ.