ಉಡುಪಿ : ಕಸ್ಟಮ್ ಹೆಸರಿನಲ್ಲಿ ವೈದ್ಯನಿಗೆ 1.33 ಕೋಟಿ ವಂಚನೆ

‘ಫೆಡ್‌ಎಕ್ಸ್’ ಕೊರಿಯರ್ ಪ್ಯಾಕೇಜ್ ನಲ್ಲಿ ಡ್ರಗ್ಸ್, ಪಾಸ್ಪೋರ್ಟ್, ಎಟಿಎಂ ಮತ್ತು ಯುಎಸ್ ಡಾಲರ್ ಗಳಂತಹ ಕಾನೂನುಬಾಹಿರ ವಸ್ತುಗಳು ಇವೆ ಎಂದು ಹೇಳಿಕೊಂಡು ಪೊಲೀಸ್ ಅಧಿಕಾರಿಗಳಂತೆ ನಟಿಸಿ 53 ವರ್ಷದ ವ್ಯಕ್ತಿಯೊಬ್ಬರ ಬಳಿ 1.33 ಕೋಟಿ ರೂ.ಗಳನ್ನು ವಂಚಿಸಿರುವ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ ಅವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬರ್ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವ ಬಗ್ಗೆ ತಿಳಿಸಿದ್ದಾರೆ.
ಅದಲ್ಲದೇ ಸೈಬರ್ ವಂಚಕರು ತಾವು ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್‌ಗೆ ಕರೆ ಮಾಡಿದ್ದರು. ಕರೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿದ್ದಂತೆ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಳಲಿ ಸೇತುವೆಯಲ್ಲಿ ಸಂಚಾರ ಬಂದ್, ಸಾರ್ವಜನಿಕರಲ್ಲಿ ಮೂಡಿದ ಗೊಂದಲ
ಅಷ್ಟೇ ಅಲ್ಲದೇ, ಜು.29ರಿಂದ ಆ.9ರ ತನಕ ಅವರ ಮನೆಯ ರೂಮ್ ನಲ್ಲಿ ಇರಿ ಹಾಗೂ ಬೇರೆಯವರೊಂದಿಗೆ ಸಂಪರ್ಕ ನಡೆಸದಂತೆ ಸೂಚನೆ ನೀಡಿದ್ದಾರೆ. ಕೊನೆಗೆ ಈ ವಂಚಕರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು, ಈ ವಂಚಕರ ಮಾತನ್ನು ನಂಬಿದ ವೈದ್ಯರಾದ ಅರುಣ್ ಕುಮಾರ್, ಖಾತೆಯಿಂದ ಆ.6ರಿಂದ ಆ.9 ರವರೆಗೆ ಸರಿಸುಮಾರು 1,33,81,000 ಕೋಟಿ ರೂ ಹಣವನ್ನು ವರ್ಗಾಯಿಸಿದ್ದಾರೆ.