ನವದೆಹಲಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಡಿಸೆಂಬರ್ 6ಕ್ಕೆ ಇಪ್ಪತ್ತೆರಡು ವರ್ಷ. ಈ ನಡುವೆ ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಅರವತ್ತು ವರ್ಷಗಳಿಂದ ಸುಪ್ರೀಂ ಕೋರ್ಟ್ ಎದುರು ಪಟ್ಟು ಹಿಡಿದು ಕೂತಿದ್ದ ಮುಖ್ಯ ಅರ್ಜಿದಾರರಲ್ಲಿ ಒಬ್ಬರಾದ ಮೊಹಮದ್ ಹಾಶಿಮ್ ಅನ್ಸಾರಿ ತಾವು ಕೇಸಿನಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ.

ಇಡೀ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವುದರಿಂದ ತಾವು ಅತೀವ ಬೇಸರಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಅನ್ಸಾರಿ ತಿಳಿಸಿದ್ದಾರೆ. ರಾಮ್ ಲಲ್ಲಾ ಜಾಗವನ್ನು ಕೂಡ ಯಥಾಸ್ಥಿತಿಯಲ್ಲಿ ಬಿಟ್ಟು ಬಿಡಲು ಮನವಿ ಮಾಡಿರುವ ಅನ್ಸಾರಿ, ದೀರ್ಘಕಾಲದ ವಿವಾದಕ್ಕೆ ಇತಿಶ್ರೀ ಹಾಡಲು ಇದು ಸಕಾಲ ಎಂದಿದ್ದಾರೆ.

babri

ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅನ್ಸಾರಿ, ಬಾಬ್ರಿಮಸೀದಿ ವಿಷಯದಲ್ಲಿ ಕೋಮುಗಲಭೆಗಳು ಹೆಚ್ಚಾಗಲು ಆಜಮ್ ಖಾನ್ ಅವರೇ ನೇರ ಕಾರಣ ಎಂದು ದೂಷಿಸಿದ್ದಾರೆ. ಆಜಮ್ ಖಾನ್‌ಗೆ ನಿಜವಾದ ಕಾಳಜಿಯಿದ್ದಲ್ಲಿ ಅವರು ರಾಜಕೀಯ ಮುಕ್ತವಾಗಿ ನ್ಯಾಯಕ್ಕಾಗಿ ಹೋರಾಡಲಿ ಎಂದು ಗುಡುಗಿದ ಅನ್ಸಾರಿ, 22ನೇ ವರ್ಷದ ಸ್ಮರಣಾಚರಣೆಯಲ್ಲೂ ತಾವು ಭಾಗಿಯಾಗುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

1959ರಲ್ಲಿ ಫೈಸಲಾಬಾದ್ ಕೋರ್ಟಿನಲ್ಲಿ ದೂರು ಅರ್ಜಿ ಸಲ್ಲಿಸಿದ್ದ ಅನ್ಸಾರಿಗೆ ಈಗ ವಯಸ್ಸು 92 ವರ್ಷ. ಹಲವು ವರ್ಷಗಳಿಂದಲೂ ತಮ್ಮ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಅನ್ಸಾರಿ ಕಳೆದ ಡಿಸೆಂಬರ್‌ನಲ್ಲಿ ಕಾಂಗ್ರಸ್ಸಿನವರು ಮುಸ್ಲಿಮರಲ್ಲಿ ನರೇಂದ್ರ ಮೋದಿಯ ಬಗ್ಗೆ ಭಟ ಹುಟ್ಟಿಸುತ್ತಿದ್ದಾರೆಂದೂ, ನರೇಂದ್ರ ಮೋದಿಯ ಅಧಿಕಾರಕ್ಕೆ ತರಲಿಕ್ಕಾಗಿ ಮುಸ್ಲಿಮರೆಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂಬ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಕೆಂಗಣ್ಣಿಕೂ ಗುರಿಯಾಗಿದ್ದರು.

ಅನ್ಸಾರಿ ನಿರ್ಧಾರವನ್ನು ಶ್ಲಾಘಿಸಿರುವ ಉತ್ತರ ಪ್ರದೇಶ ಬಿಜೆಪಿ ನಾಯಕ ಯೋಗಿ ಆದಿತ್ಯ ನಾಥ್ ‘ಈ ನಿರ್ಧಾರಕ್ಕಾಗಿ ಅನ್ಸಾರಿಯವರನ್ನು ನಾನು ಅಭಿನಂದಿಸುತ್ತೇನೆ. ಅಷ್ಟೇ ಅಲ್ಲ ವಾಸ್ತವವನ್ನು ಒಪ್ಪಿಕೊಂಡುವ ಅವರನ್ನು ಗೌರವಿಸುತ್ತೇನೆ. ರಾಜಕೀಯಗೊಳಿಸಲಾಗುತ್ತಿರುವ ಈ ಪ್ರಕರಣದಿಂದ ಎಲ್ಲರೂ ಹಿನ್ನೆಡೆದು ವಿವಾದಕ್ಕೆ ಕೊನೆ ಹಾಡಿದರೆ ಅದಕ್ಕಿಂತ ಸಂತಸ ಇನ್ನೊಂದಿಲ್ಲ’ ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *