ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಕಣಿವೆ ರಾಜ್ಯದ ವಿವಿಧೆಡೆ ಭಯೋತ್ಪಾದಕರು ಭಾರತೀಯ ಸೇನಾ ಯೋಧರ ಮೇಲೆ ಆಕ್ರಮಣ ನಡೆಸಿದ್ದಾರೆ. ಬೆಳಗಿನ ನಸುಕಿನ 3 ಗಂಟೆಗೇ ಸೇನಾ ಶಿಬಿರದ ಮೇಲೆ ಆರು ಉಗ್ರರು ದಾಳಿ ನಡೆಸಿ 7 ಸೈನಿಕರನ್ನ ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಮೂವರು ಪೊಲೀಸರೂ ಬಲಿಯಾಗಿದ್ದಾರೆ. ಭಾರತೀಯ ಸೈನಿಕರು ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿ ಎಲ್ಲ 6 ಉಗ್ರರನ್ನ ಸಂಹರಿಸಿದ್ದಾರೆ.
ಇದೇ ವೇಳೆ, ಕಾಶ್ಮೀರದ ಇನ್ನೂ ಎರಡು ಕಡೆ ಉಗ್ರಗಾಮಿಗಳು ಆಕ್ರಮಣ ನಡೆಸಿರುವುದು ವರದಿಯಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಸೌರಾ ಎಂಬಲ್ಲಿ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸೈನಿಕರ ಪ್ರತಿದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದು, ಮತ್ತೊಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆತನನ್ನ ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮತ್ತೊಂದು ಪ್ರಕರಣ ದಕ್ಷಿಣ ಕಾಶ್ಮೀರದ ಶೋಪಿಯನ್ ಪ್ರದೇಶದಲ್ಲಿ ಸಂಭವಿಸಿದೆ. ಶೋಪಿಯನ್ ಪೊಲೀಸ್ ಠಾಣೆಯಲ್ಲಿ ಉಗ್ರರು ಗ್ರಿನೇಡ್ ದಾಳಿ ನಡೆಸಿರುವುದು ವರದಿಯಾಗಿದೆ. ಅದೃಷ್ಟಕ್ಕೆ ಪೊಲೀಸರು ಅಥವಾ ಯಾವುದೇ ಸಾರ್ವಜನಿಕರಿಗೆ ಅಪಾಯವಾಗಿಲ್ಲ. ಉಗ್ರರನ್ನ ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.




