ಆ.11ರಂದು ಬಿ.ಸಿ.ರೋಡಿನಲ್ಲಿ ಮಡಿವಾಳ ಸಮಾಜ ಬಾಂಧವರ “ಕೆಸರ್‌ಡೊಂಜಿ ದಿನ-24”
ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) , ಮಡಿವಾಳ ಯುವ ಬಳಗ ಮತ್ತು ಮಹಿಳಾ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ.) ಇವರ ಸಹಕಾರದೊಂದಿಗೆ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಡಿವಾಳ ಸಮಾಜ ಬಾಂಧವರಿಗೆ ಆ.11ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ಬಳಿಯ ಕೆಸರು ಗದ್ದೆಯಲ್ಲಿ “ಕೆಸರ್‌ಡೊಂಜಿ ದಿನ-24” ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘದ ಅಧ್ಯಕ್ಷ ಹರೀಶ್ ಮಂಕಡೆ ತಿಳಿಸಿದ್ದಾರೆ.
ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೂರು ಜಿಲ್ಲೆಯಿಂದ ಸುಮಾರು 2000 ಮಡಿವಾಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದರು.ಶ್ರೀಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ಸಮುದಾಯದ ಸಾಧಕರಾದ ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಜೂನಿಯರ್ ಕಮಿಷನರ್ ಆಫೀಸರ್ ಉಮೇಶ್ ಸಾಲಿಯಾನ್ ಹಿರಿಯಡ್ಕ, ಚಿತ್ರ ನಟ “ಕಾಂತಾರ” ಖ್ಯಾತಿಯ ಶನಿಲ್‌ಗುರು ಬಂಟ್ವಾಳ , ಭಾಸ್ಕೆಟ್ ಬಾಲ್ ಕ್ರೀಡಾಪಡು ಸಂಕೇತ್ ಎಸ್. ಹೊಸಬೆಟ್ಟು ರವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸಮಾರಂಭದ ಸಭಾಧ್ಯಕ್ಷತೆಯನ್ನು ದ. ಕ. ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ. ಎನ್. ಪ್ರಕಾಶ್ ವಹಿಸಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 40 ಮಂದಿ ಗಣ್ಯರು ಭಾಗವಹಿಸಲಿದ್ದಾರೆ.ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡೆಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.
ಸಮಾಜ ಬಾಂಧವರ ಸಂಘಟನೆ, ತುಳುನಾಡಿನ ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಕುಕ್ಕಾಜೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎನ್. ಕೆ. ಶಿವ ನಂದಾವರ,ಯುವ ಬಳಗದ ಅಧ್ಯಕ್ಷ
ಸಂದೇಶ್ ಕೊಯಿಲ, ಮಹಿಳಾ ಘಟಕದ ಅಧ್ಯಕ್ಷ ಶೋಭಾ ಪಂಜಿಕಲ್ಲು ಮತ್ತಿತರರು ಉಪಸ್ಥಿತರಿದ್ದರು.