ಮಂಗಳೂರು : ಬಸ್ಸಿನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ, ಆಸ್ಪತ್ರೆ ತಲುಪುವ ಮುನ್ನವೇ ಮೃತ ಪಟ್ಟ ವ್ಯಕ್ತಿ
ಹೃದಯಾಘಾತಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವ ಉಳಿಸಲು ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಘಟನೆಯು ಸೋಮವಾರ ನಗರದಲ್ಲಿ ನಡೆದಿದೆ. ಆದರೆ ದುರದೃಷ್ಟವಶಾತ್ ವ್ಯಕ್ತಿಯು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ 8:30ರ ಸುಮಾರಿಗೆ ಮಂಗಳೂರಿನಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಪಿರೇರಾ ಟ್ರಾವೆಲ್ಸ್ ಬಸ್ಸಿಗೆ ಕೊಟ್ಟಾರ ಚೌಕಿಯಲ್ಲಿ ಪ್ರಯಾಣಿಕರೊಬ್ಬರು ಹತ್ತಿದ್ದರು. ಆದರೆ ಬಸ್ ಕೋಡಿಕಲ್ ಕ್ರಾಸ್ ತಲುಪುತ್ತಿದ್ದಂತೆ ಅವರು ಏಕಾಏಕಿ ಸಹ ಪ್ರಯಾಣಿಕರ ಮೇಲೆ ಕುಸಿದು ಬಿದ್ದರು.
ಆ ಕೂಡಲೇ ಬಸ್‌ನಲ್ಲಿದ್ದ ಕಾಪುವಿನ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಿನೆಟ್ ಪ್ರಥಮ ಚಿಕಿತ್ಸೆ ನೀಡಿ ಹೃದಯಾಘಾತವಾಗಿದೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಆ ಕೂಡಲೇ ಚಾಲಕ ಬಸ್ಸನ್ನು ಮುಕ್ಕದ ಖಾಸಗಿ ಆಸ್ಪತ್ರೆಯ ಕಡೆಗೆ ಕೊಂಡೊಯ್ದರಾದರೂ ಆಸ್ಪತ್ರೆಗೆ ತಲುಪುವ ಮುನ್ನವೇ ವ್ಯಕ್ತಿ ಬಸ್‌ನಲ್ಲೇ ಮೃತಪಟ್ಟಿದ್ದಾರೆ.
ಬಸ್ ನಿರ್ವಾಹಕ ಅನಿಲ್ “ ಆ ವ್ಯಕ್ತಿಯು ಬಸ್ಸಿಗೆ ಹತ್ತಿದ ಕೂಡಲೇ ಸಹ ಪ್ರಯಾಣಿಕರ ಹೆಗಲ ಮೇಲೆ ಕುಸಿದು ಬಿದ್ದರು. ಫಿಟ್ಸ್ ಇರಬಹುದು ಎಂದುಕೊಂಡೆ. ಆದರೆ ಹೃದಯಾಘಾತ ಉಂಟಾಗಿರಬಹುದೆಂದು ತತ್‌ಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆವು. ಆಸ್ಪತ್ರೆಯಲ್ಲಿಯೂ ತಕ್ಷಣ ದಾಖಲಿಸಲು ನೆರವಾಗಿದ್ದಾರೆ’ ಎಂದಿದ್ದಾರೆ. ಚಾಲಕ ರವಿಯು “ಆ ಪ್ರಯಾಣಿಕ ಕೋವಿಡ್ ಅವಧಿಗೂ ಹಿಂದೆ ನಮ್ಮ ಬಸ್ಸಿನಲ್ಲಿ ಬರುತ್ತಿದ್ದರು. ಆ ಬಳಿಕ ಅವರನ್ನು ನೋಡಿದ ನೆನಪಿಲ್ಲ’ ಎಂದು ಹೇಳಿದ್ದಾರೆ.