ಕಾರಿಂಜ,ನರಹರಿ,ಏರಿಮಲೆ,ನೀಲಿ ದೇವಳದಲ್ಲಿ ತೀರ್ಥಸ್ನಾನ
ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಹಾಗೂ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನವು ಸಂಭ್ರಮ,ಸಡಗರದಿಂದ ನಡೆಯಿತು.
ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ “ಸಪ್ತವರ್ಣ” ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪರಾಂಪರಿಕೆಯ ದಿನ ಆಟಿ ಅಮಾವಾಸ್ಯೆ ಪವಿತ್ರವಾಗಿದೆ.ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧುವರರು ನರಹರಿ ಪರ್ವತವನ್ನೇರಿ ಶಂಖ, ಚಕ್ರ, ಗಧಾ, ಪದ್ಮ ಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಅದೇರೀತಿ ಬೃಹತ್‌ಬಂಡೆಗಳಿಂದ ಆವೃತವಾದ ಗಿರಿಧಾಮದಲ್ಲಿರುವ ಆಕರ್ಷಣೀಯ,ಅತ್ಯಂತ ಪ್ರಾಚೀನವಾದ ಕಾರಿಂಜ ಕ್ಷೇತ್ರದ ದಕ್ಷಿಣ ಭಾಗದ ತಳದಲ್ಲಿರುವ ಗದಾತೀರ್ಥವೆಂಬ ಸರೋವರದಲ್ಲಿ ಭಕ್ತಾಧಿಗಳು ಹಾಗೂ ವಿಶೆಷವಾಗಿ ನವದಂಪತಿಗಳು ಇಲ್ಲಿ ಪುಣ್ಯ ಸ್ನಾನಮಾಡಿ ಪಾರ್ವತಿ ಪರಮೇಶ್ವರರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಭಾನುವಾರವಾದುದರಿಂದ ಎರಡೂ ಕ್ಷೇತ್ರದಲ್ಲಿಯು ಮುಂಜಾನೆ ಸುಮಾರು ೩ ಗಂಟೆಯಿಂದಲೇ ಭಕ್ತರು ದೇವಳಕ್ಕಾಗಮಿಸಿ ತೀರ್ಥಸ್ನಾನಗೈ್ಉ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು.ದೇವಳದಲ್ಲೇ ಭಕ್ತರಿಗೆ ಹಾಲೆಯ ಕೆತ್ತೆ ಕಷಾಯ ವಿತರಿಸಲಾಯಿತು. ದೇವಳದ ಪ್ರಮುಖರು,ಹಲವಾರು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.