ಡಾ. ಹೆಗ್ಗಡೆಯವರ ದೂರದೃಷ್ಟಿಯ ಯೋಜನೆ ಅಭಿನಂದನೀಯ: ಶಿಕ್ಷಣಾಧಿಕಾರಿ ಮಂಜುನಾಥನ್
ಬಂಟ್ವಾಳ : ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಹಾಗೂ ಸರಕಾರಿಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯ ಯೋಜನೆ ಅಭಿನಂದನೀಯವಾಗಿದೆ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ . ಅಭಿಪ್ರಾಯ ಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ. ) ಬಂಟ್ವಾಳ ವತಿಯಿಂದ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಜರಗಿದ “ಸುಜ್ಞಾನ ನಿಧಿ” ಹಾಗೂ ಜ್ಞಾನದೀಪ ಶಿಕ್ಷಕರ ಆದೇಶ ಪತ್ರ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಶಿಕ್ಷಣದಿಂದ ಸರ್ವ ಸಂಕಷ್ಟಗಳನ್ನು ದೂರ ಮಾಡಬಹುದು, ಶಿಕ್ಷಣವನ್ನು ಪ್ರೀತಿಸಿದ್ದಲ್ಲಿ ಅದು ನಮ್ಮನ್ನು ಉನ್ನತ ಸ್ಥಾನಕ್ಕೆರೀಸುತ್ತದೆ ಎಂದರು.
ಫರಂಗಿಪೇಟೆ ಸೇವಾಂಜಲಿ ಟೆಸ್ಟ್ ಅಧ್ಯಕ್ಷರಾದ ಕೃಷ್ಣ ಕುಮಾರ್ ಪೂಂಜಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸರಕಾರಗಳು ಮಾಡದಂತ ಹಲವಾರು ಕಾರ್ಯವನ್ನು ಡಾ. ವೀರೇಂದ್ರ ಹೆಗ್ಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿದ್ದು, ಯೋಜನೆಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಬಲಿಯಾಗದೆ, ಯೋಜನೆ ಮೂಲಕ ಸಿಗುವ ಸೌಲಭ್ಯಗಳನ್ನು ಪಡೆದು ಡಾ.ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಯನ್ನು ಸಹಕಾರಗೊಳಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿ ಪ್ರಸಕ್ತ ಸಾಲಿನಲ್ಲಿ 310 ವಿದ್ಯಾರ್ಥಿಗಳಿಗೆ 1. 41 ಕೋ.ರೂ. ಸುಜ್ಞಾನನಿಧಿ ಹಾಗೂ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ 18 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸಿದ್ದು ಪ್ರತಿ ತಿಂಗಳಿಗೆ 1. 44 ಲ.ರೂ. ವ್ಯಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಸಿದ್ದಕಟ್ಟೆ ವಲಯ ಅಧ್ಯಕ್ಷ ಸದಾನಂದ ಶೀತಾಲ ಉಪಸ್ಥಿತರಿದ್ದರು.ತುಂಬೆ ವಲಯ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.