ತಿರುವೈಲು ಕೆಲರೈಕೋಡಿಯಲ್ಲಿ ಮನೆಗೆ
ಗುಡ್ದದಿಂದ ಬಂಡೆಕಲ್ಲು, ಮಣ್ಣು ಕುಸಿತ
ಕೈಕಂಬ : ಮಂಗಳೂರು ನಗರ ಪಾಲಿಕೆಯ ವಾಮಂಜೂರು ತಿರುವೈಲು ವಾರ್ಡ್ನ ಕೆಲರೈಕೋಡಿ ಎಂಬಲ್ಲಿ ಆ. ೨ರಂದು ಮಧ್ಯಾಹ್ನ ಜಯಂತಿ ಡಿ. ಅಮೀನ್ ಎಂಬವರ ಮನೆಯ ಎದುರಿಗೆ ಪಕ್ಕದ ಗುಡ್ಡದ ಬೃಹತ್ ಗಾತ್ರದ ಬಂಡೆಗಳು, ಮಣ್ಣು ಕುಸಿದು ಬಿದ್ದಿದೆ. ಹೀಗೆಯೇ ಮಳೆ ಮುಂದುವರಿದರೆ ಸಂಪೂರ್ಣ ಗುಡ್ಡವೇ ಮನೆಗೆ ಕುಸಿದು ಬೀಳುವ ಅಪಾಯವಿದೆ.
ಕಳೆದ ವರ್ಷವೂ ಮನೆಗೆ ಗುಡ್ಡದ ಮಣ್ಣು, ಕಲ್ಲುಬಂಡೆ ಬಿದ್ದಿತ್ತು. ಬಳಿಕ ಗುಡ್ಡಕ್ಕೆ ವಿಶಾಲ ಟಾರ್ಪಲ್ ಹಾಸಲಾಗಿ, ಮಣ್ಣು ಕುಸಿತ ಹಾಗೂ ನೀರಿನ ಒರತೆಗೆ ತಡೆ ಹೇರಲಾಗಿತ್ತು. ಜಯಂತಿಯವರ ಮನೆಗೆ ಶುಕ್ರವಾರ ಮತ್ತೆ ಗುಡ್ಡ ಕುಸಿದಿದ್ದರೆ, ಗುಡ್ಡದ ಮೇಲ್ಭಾಗದ ಅಂಚಿನಲ್ಲಿರುವ ಶಂಭು ಪೂಜಾರಿ ಮತ್ತು ಬಾಬು ಶಕಿಲಾ ಎಂಬವರ ಮನೆಗಳು ಕುಸಿಯುವ ಹಂತ ತಲುಪಿವೆ.
“ಕಳೆದ ವರ್ಷ ಮನೆಗೆ ಭೇಟಿ ನೀಡಿದ್ದ ಮನಪಾ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗುಡ್ಡದಿಂದ ಅಪಾಯ ಎದುರಿಸುತ್ತಿರುವ ಮೂರು ಮನೆ ಸ್ಥಿತಿ-ಗತಿ ಖಚಿತಪಡಿಸಿಕೊಂಡು, ಗುಡ್ಡದ ಬದಿಗೆ ರಕ್ಷಣಾಗೋಡೆ ನಿರ್ಮಿಸುವ ಹಾಗೂ ಪರಿಹಾರದ ಭರವಸೆ ನೀಡಿದ್ದರು. ಕಳೆದ ವರ್ಷದಂತೆ ಈ ವರ್ಷವೂ ಗುಡ್ಡಕ್ಕೆ ಹಾಸಲು ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ ಮತ್ತು ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ) ಅವರು ಟಾರ್ಪಲ್ ಒದಗಿಸಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭರವಸೆಯಂತೆ ಇದುವರೆಗೆ ಇಲ್ಲಿ ಏನೂ ಪರಿಹಾರ ಕಾರ್ಯ ನಡೆದಿಲ್ಲ” ಎಂದು ಜಯಂತಿ ಅವರು ಬೇಸರ ವ್ಯಕ್ತಪಡಿಸಿದರು.
೨೦೨೧ರಿಂದಲೂ ಈ ಗುಡ್ಡದಿಂದ ತನ್ನ ಮನೆಗೆ ಅಪಾಯವಿದೆ ಎಂದು ಮನಪಾ ಹಾಗೂ ಸಂಬಂಧಪಟ್ಟ ಇತರ ಇಲಾಖಾ ಅಧಿಕಾರಿಗಳಿಗೆ ಜಯಂತಿಯವರು ಮನವಿ ನೀಡುತ್ತ ಬಂದಿದ್ದಾರೆ. ಪ್ರಸಕ್ತ ಮನೆಗೆ ಒದಗಿ ಬಂದಿರುವ ಅಪಾಯಕಾರಿ ಸನ್ನಿವೇಶದಲ್ಲೂ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸ್ಥಳೀಯರಿಂದ ಆರೋಪಗಳು ಕೇಳಿ ಬಂದಿವೆ. ಜಯಂತಿಯವರ ಮನೆಗೆ ಗುರುವಾರ(ಆ. ೧ರಂದು) ಎಂಎಲ್‌ಸಿ ಮಂಜುನಾಥ ಭಂಡಾರಿ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.