Published On: Wed, Aug 7th, 2024

ಕರ್ಪೆ- ಕುಪ್ಪೆಪದವು ಸಂಪರ್ಕ ರಸ್ತೆಗೆ ಸಾರ್ವಜನಿಕರ ಬೇಡಿಕೆ, ಇದರಿಂದ ಮಂಗಳೂರು, ಬಂಟ್ವಾಳ ಮತ್ತಷ್ಟು ಹತ್ತಿರವಾಗಲಿದೆ

ಕೈಕಂಬ : ಮಂಗಳೂರು ತಾಲೂಕಿನ ಕುಪ್ಪೆಪದವು ದೊಡ್ಡಳಿಕೆ ಮತ್ತು ಬಂಟ್ವಾಳ ತಾಲೂಕಿನ ಕರ್ಪೆ ನಡುವೆ ಹರಿಯುವ ಪಲ್ಗುಣಿ ನದಿಗೆ ಬೃಹತ್ ಆಣೆಕಟ್ಟೆಯ ನಿರ್ಮಾಣವಾಗಿದೆ. ಇದು ಕೃಷಿಗೆ ನೀರು, ಬಹುಗ್ರಾಮ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಸಿಸಲಿದೆ. ಹಾಗಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಒಟ್ಟು 36 ಕೋಟಿ ರೂ ವೆಚ್ಚದಲ್ಲಿ ಬೃಹತ್ ಆಣೆಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಇದು ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಬೆಸೆಯಲಿದೆ.

ಆಣೆಕಟ್ಟೆಯ ಎರಡೂ ಭಾಗದಲ್ಲಿರುವ ಕಚ್ಚಾ ರಸ್ತೆಗಳನ್ನು ಡಾಮಾರೀಕರಣಗೊಳಿಸಲಾಗಿದೆ. ಹಾಗೂ ಬಜಪೆ ವಿಮಾನ ನಿಲ್ದಾಣ ಮತ್ತು ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುವ ಬೆಳ್ತಂಗಡಿ, ವೇಣೂರು, ಪೂಂಜಾಲ್ ಕಟ್ಟೆ ಮತ್ತು ವಾಮದಪದವು ಸುತ್ತಲಿನ ಜನರಿಗೆ ತುಂಬಾ ಹತ್ತಿರದ ರಸ್ತೆ ಸಂಪರ್ಕವಾಗಲಿದೆ. ಇನ್ನು ನದಿ ತಳಮಟ್ಟದಿಂದ 25 ಮೀ. ಎತ್ತರದ 51ಪಿಲ್ಲರ್​​​ಗಳನ್ನು ಹೊಂದಿರುವ ಅಣೆಕಟ್ಟೆಯ ಮೇಲ್ಭಾಗದಲ್ಲಿ 5.50 ಮೀ. ಅಗಲದ ರಸ್ತೆ ನಿರ್ಮಾಣ ಮಾಡಲಾಗಿದೆ.

ಈ ರಸ್ತೆಯಲ್ಲಿ ಲಘು ವಾಹನಗಳು ಸಂಚಾರ ನಡೆಸಬಹುದು. ನದಿಯ ಎರಡೂ ಭಾಗದ ಜನರಿಗೆ ಸಂಪರ್ಕ ಸುಲಭವಾಗಲಿದೆ. ಈ ಉದ್ದೇಶದಿಂದ ಆಣೆಕಟ್ಟೆಯ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿದೆ. ಆಣೆಕಟ್ಟೆಯ ಎರಡೂ ಭಾಗದ ಸಂಪರ್ಕ ರಸ್ತೆಗಳನ್ನು ವಾಹನ ಸಂಚಾರಕ್ಕೆ ಯೋಗ್ಯವಾಗಿಸುವುದು ಇಲಾಖೆಗೆ ಬಿಟ್ಟಿದ್ದು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಹೇಳಿದ್ದಾರೆ.

ಆಣೆಕಟ್ಟೆಯ ಕರ್ಪೆ ಭಾಗದಲ್ಲಿ ಅಂದಾಜು 250 ರಿಂದ 300 ಮೀಟರ್ ಕಚ್ಚಾ ರಸ್ತೆಯಿದ್ದು, ಈ ರಸ್ತೆಯನ್ನು ಡಾಮಾರೀಕರಣಗೊಳಿಸಿದರೆ ಸಿದ್ದಕಟ್ಟೆಯನ್ನು ಸಂಪರ್ಕಿಸುತ್ತದೆ. ಇಲ್ಲಿಂದ ವೇಣೂರು ಮತ್ತು ಪೂಂಜಾಲ್ ಕಟ್ಟೆ ಮೂಲಕ ಬೆಳ್ತಂಗಡಿಗೆ ಹತ್ತಿರದ ಸಂಪರ್ಕವಾಗಲಿದೆ. ಆಣೆಕಟ್ಟೆಯ ಕುಪ್ಪೆಪದವು ಭಾಗದಲ್ಲಿ ಅಂದಾಜು ಒಂದು ಕಿಲೋಮೀಟರ್ ರಸ್ತೆಯನ್ನು ಡಾಮಾರೀಕರಣಗೊಳಿಸಿದರೆ ಕುಪ್ಪೆಪದವು-ಎಡಪದವು-ಗುರುಪುರ ಕೈಕಂಬ ಮೂಲಕ ಬಜಪೆ ವಿಮಾನ ನಿಲ್ದಾಣ ಹಾಗೂ ಕಟೀಲು ಕ್ಷೇತ್ರಕ್ಕೆ ಹತ್ತಿರದ ಮಾರ್ಗವಾಗಲಿದೆ. ಇದರ ಜತೆಗೆ ಗಂಜಿಮಠ, ಇರುವೈಲು, ಮುಚ್ಚೂರು ಮತ್ತಿತರ ಪ್ರದೇಶಕ್ಕೂ ಹಾಗೂ ಬಂಟ್ವಾಳ-ಸಿದ್ದಕಟ್ಟೆ-ಬೆಳ್ತಂಗಡಿ-ವೇಣೂರು-ಪೂಂಜಾಲಕಟ್ಟೆಗೆ ಹತ್ತಿರದ ಮಾರ್ಗವಾಗಳಿದ್ದು, ಇದು ಸಮಯ ಮತ್ತು ಜನರಿಗೆ ಹೋಗಿ ಬರುವ ಖರ್ಚನ್ನು ಕಡಿಮೆ ಮಾಡುತ್ತದೆ.

ಇನ್ನು ಕರ್ಪೆ ಭಾಗದ ರಸ್ತೆ ಖಾಸಗಿ ಜಾಗದಲ್ಲಿದ್ದು, ಸಾರ್ವಜನಿಕರಿಗೆ ಪ್ರಯೋಜನವಾಗುವುದಾದರೆ ರಸ್ತೆ ನಿರ್ಮಾಣಕ್ಕೆ ನಮ್ಮಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಜಾಗದ ಮಾಲೀಕ ಶಶಿಧರ್ ಪ್ರಭು ಹೇಳುತ್ತಾರೆ. ಬಂಟ್ವಾಳ ಮತ್ತು ಮಂಗಳೂರು ಉತ್ತರದ ಶಾಸಕರು ಮನಸ್ಸು ಮಾಡಿದರೆ ಒಂದೂವರೇ ಕಿಲೋಮೀಟರ್ ರಸ್ತೆಗೆ ಡಾಮಾರೀಕರಣ ಮಾಡಿಸುವುದು ದೊಡ್ಡ ವಿಷಯವೇನಲ್ಲ ಜೊತೆಗೆ ಸಂಭಂದಪಟ್ಟ ಇಲಾಖೆಗಳು ಮನಸ್ಸು ಮಾಡಬೇಕು. ಮಳೆಗಾಲದಲ್ಲಿ ಈ ರಸ್ತೆ ಕೆಸರುಮಯವಾಗಿ ವಾಹನ ಸಂಚಾರ ಅಸಾಧ್ಯವಾಗಿದೆ. ಮಳೆಗಾಲ ಹೊರತುಪಡಿಸಿ ಉಳಿದಂತೆ ಈಗಾಗಲೇ ಈ ರಸ್ತೆಯನ್ನು ವಾಹನ ಸವಾರರು ಬಳಸುತ್ತಿದ್ದಾರೆ. ಡಾಮರೀಕರಣಗೊಂಡರೆ ಮಳೆಗಾಲದಲ್ಲೂ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗಲಿದೆ.

ಅಣೆಕಟ್ಟು ನಿರ್ಮಾಣದ ಬಳಿಕ ಗುತ್ತಿಗೆದಾರ ಸಂಸ್ಥೆಯವರು ಕಚ್ಚಾ ಸಂಪರ್ಕ ರಸ್ತೆಗೆ ಗೇಟು ಅಳವಡಿಸಿ ಬೀಗ ಹಾಕಿದ್ದರು. ಗೇಟು ಹಾಕಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನನ್ನ ವಿರುದ್ಧ ಅಪಪ್ರಚಾರ ನಡೆದಿತ್ತು. ವಾಸ್ತವದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಮ್ಮಿಂದ ಯಾವುದೇ ಆಕ್ಷೇಪ ಇಲ್ಲ. ನಮ್ಮ ಖಾಸಗಿ ಜಾಗದಲ್ಲಿ ಬೇರೆ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ನಾವು ಅವಕಾಶ ನೀಡಿದ್ದೇವೆ. ಅದೇ ರೀತಿ ಇಲ್ಲಿಯೂ ಸಾರ್ವಜನಿಕರಿಗೆ ಪ್ರಯೋಜನವಾಗುವುದಾದರೆ ರಸ್ತೆ ನಿರ್ಮಾಣಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಶಶಿಧರ್ ಪ್ರಭು. ದೋಟ ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter