ಗಂಜಿಮಠದ ನಾರಳದಲ್ಲಿ `ಆಟಿಡೊಂಜಿ ದಿನ’
ಕೈಕಂಬ:: ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಳ ಸಂಕೇಶದಲ್ಲಿ ಕಲಾಚೇತನ ಯುವತಿ ಮಂಡಳಿ, ಕಲಾವರ್ಧಕ ಯುವಕ ಮಂಡಲ(ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ರೀಶಕ್ತಿ ಗುಂಪು ಅಂಗನವಾಡಿ ಕೇಂದ್ರದ ಜಂಟಿ ಆಶ್ರಯದಲ್ಲಿ ನಾರಳದ ಶ್ರೀ ಸೀತಾರಾಮ ಭಜನಾ ಮಂದಿರ(ರಿ) ಇಲ್ಲಿ ಜು. ೨೮ರಂದು `ಆಟಿಡೊಂಜಿ ಕೂಟ’ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮಾತನಾಡಿ, ತುಳುನಾಡ ಹಿರಿಯರು ಹೇಳುವಂತೆ ಆಟಿ ಕಷ್ಟದ ತಿಂಗಳಾಗಿತ್ತು. ಕೃಷಿ ಮುಗಿಸಿ ಕೃಷಿಕರು ಮನೆಯಲ್ಲಿರುತ್ತಿದ್ದ ಸಮಯ ಅದಾಗಿತ್ತು. ಆಟಿ ತಿಂಗಳಲ್ಲಿ ಜನರಿಗೆ ಸ್ಥಳೀಯ ಹಾಗೂ ಪ್ರಕೃತಿದತ್ತವಾಗಿ ಲಭ್ಯವಿರುವ ಸೊಪ್ಪು, ತರಕಾರಿ, ಹಣ್ಣುಗಳೇ ಪಥ್ಯವಾಗಿತ್ತು. ಅವು ಆರೋಗ್ಯವರ್ಧಕ ಆಹಾರಗಳಾಗಿತ್ತು. ಆದರೆ ಈಗ ಎಲ್ಲರೂ ಉದ್ಯೋಗಸ್ಥರಾಗಿದ್ದು, ಮುಂದಿನ ಪೀಳಿಗೆಗೆ ಇಂತಹ ಕಾರ್ಯಕ್ರಮಗಳ ಮೂಲಕ ಆಟಿ ತಿಂಗಳ ಮಹತ್ವ ತಿಳಿಸಿ ಕೊಡಬೇಕಿದೆ ಎಂದರು.
ಬಡಗಬೆಳ್ಳೂರು ಗ್ರಾಮದ ಗುಡ್ಡೆಯಂಗಡಿಯ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಶೆಟ್ಟಿ ಮಾತನಾಡಿ, ಹಿಂದೆ ಆಟಿಯ ೩೧ ದಿನಗಳಲ್ಲಿ ೩೧ ಬಗೆಯ ಆಹಾರ ವೈವಿಧ್ಯತೆ ಇತ್ತು. ಹಲವು ವೈಶಿಷ್ಟತೆಗಳಿಂದ ಕೂಡಿದ ಆಟಿ ತಿಂಗಳ ರೀತಿ-ರಿವಾಜು, ಕಟ್ಟು-ಕಟ್ಟಳೆ, ಆಹಾರ ಪದ್ಧತಿ ಮತ್ತು ಸಂಸ್ಕೃತಿಯನ್ನು ಇಂದು ಕೇವಲ ಒಂದು ದಿನದಲ್ಲಿ(ಆಟಿಡೊಂಜಿ ಕೂಟ) ಅನಾವರಣ ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮುಂದುವರಿಯಬೇಕಿದ್ದರೆ ಇಂತಹ ಕಾರ್ಯಕ್ರಮ ನಡೆಯಲಿ ಎಂದರು.
ಸ್ಥಳೀಯ ಮಕ್ಕಳು ತುಳುನಾಡಿನ ಆಟಿ ತಿಂಗಳ ಸಾಂಸ್ಕೃತಿಕ-ಧಾರ್ಮಿಕ ವೈಭವ ಸಾರುವ ನೃತ್ಯ ಪ್ರದರ್ಶಿಸಿದರು. ಮಾಜಿ ತಾಪಂ ಸದಸ್ಯ ಸುನಿಲ್ ಗಂಜಿಮಠ, ಮಾಜಿ ಮೇಯರ್ ಕವಿತಾ ಸನಿಲ್ ಸಂದರ್ಭೋಚಿತ ಮಾತನಾಡಿದರು. ಕಲಾಚೇತನ ಯುವತಿ ಮಂಡಳಿಯ ಕಾರ್ಯದರ್ಶಿ ಜಯಲಕ್ಷ್ಮಿ ಸ್ವಾಗತಿಸಿದರು. ಮಂಡಳಿಯ ಅಧ್ಯಕ್ಷೆ ಸಾರಿಕಾ, ಕಲಾವರ್ಧಕ ಯುವಕ ಮಂಡಲದ ಅಧ್ಯಕ್ಷ ನಾಗರಾಜ ಶೆಟ್ಟಿ, ಊರಿನ ಹಿರಿಯ ವ್ಯಕ್ತಿ ತಿಮ್ಮಪ್ಪ ಶೇಣವ ನಾರ್ಲಗುತ್ತು, ಶ್ರೀ ಸೀತಾರಾಮ ಭಜನಾ ಮಂದಿರದ ಅಧ್ಯಕ್ಷ ಲಿಖಿತ್‌ರಾಜ್, ಬಿಜೆಪಿ ಮುಖಂಡ ಸೋಹನ್ ಅತಿಕಾರಿ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಮಂಡಳಿ ಮತ್ತು ಮಂದಿರದ ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರು ಇದ್ದರು. ದೀಪಾ ಕಂಬಳಬೆಟ್ಟು ನಿರೂಪಿಸಿದರೆ, ರಮಿತಾ ವಂದಿಸಿದರು. ಬಳಿಕ ಸಾರ್ವಜನಿಕರಿಗೆ ಆಟಿ ತಿಂಗಳ ಆಹಾರಪದ್ಧತಿಯ ಊಟೋಪಚಾರ ನಡೆಯಿತು.