ಕೈಕಂಬ: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ(ಮಣೇಲ್) ಶ್ರೀಕ್ಷೇತ್ರ ದೇವರಗುಡ್ಡೆ ಶ್ರೀಸೂರ್ಯನಾರಾಯಣ ಹಾಗೂ ಪರಿವಾರ ದೇವರ ಸಾನಿಧ್ಯ ನಿರ್ಮಾಣದ ಪೂರ್ವಭಾವಿಯಾಗಿ ಜುಲೈ ೧೨ರಂದು ಭೂಕರ್ಷಣ ಹಾಗೂ ಅಂಕುರ ಬೀಜಾವಾಪ ವಿಧಿ ವಿಧಾನವು ವೇದಮೂರ್ತಿ ಪೊಳಲಿ ಶ್ರೀಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವರ ಪ್ರಾಂಗಣದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಪುಣ್ಯಾಹ ಹಾಗೂ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಾಸ್ತು ತಜ್ಞರು ಗುರುತಿಸಿದ ಗರ್ಭ ಗುಡಿ ಹಾಗೂ ಸುತ್ತುಪೌಳಿ ಇರುವ ಜಾಗದಲ್ಲಿ ಭೂಕರ್ಷಣ ಹಾಗೂ ಬೀಜಾವಾಪ ವಿಧಿವಿಧಾನವನ್ನು ವೇದಮೂರ್ತಿ ಪೊಳಲಿ ಶ್ರೀಸುಬ್ರಹ್ಮಣ್ಯ ತಂತ್ರಿಯವರು ನಡೆಸಿಕೊಟ್ಟರು.

ತಂತ್ರಿಗಳು ಜೋಡಿ ಹೋರಿಗಳಿಗೆ ನೊಗ-ನೇಗಿಲು ಕಟ್ಟಿ ಪೂಜೆ ಮಾಡಿ ಸಾನಿಧ್ಯದ ಜಾಗವನ್ನು ಉಳುಮೆ ಮಾಡಿದರು. ನೇಗಿಲಿಗೆ ಬಂಗಾರದ ಪನೋರ್ ಕಟ್ಟುವ ಕ್ರಮವಿದೆ. ಆ ನಂತರ ೧೧ ಬಗೆಯ ಧಾನ್ಯಗಳನ್ನು ಆಯಾಯ ಮಂತ್ರಗಳನ್ನು ಜಪಿಸಿ ಬಿತ್ತಿದರು. ಉಳುವಾಗ ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಪಠಿಸಲಾಯಿತು. ಮೂಲಮಂತ್ರ ಜಪದೊಂದಿಗೆ ಜಲಪ್ರೋಕ್ಷಣಾ ನಡೆಸಿ, ರಕ್ಷಾ ಮಂತ್ರ ಜಪ ಇತ್ಯಾದಿ ಕ್ರಮಗಳನ್ನು ನಡೆಸುವ ಮೂಲಕ ವಿವಿಧ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ಸಾನಿಧ್ಯ ನಿರ್ಮಾಣಗೊಂಡು ಕ್ರಮೇಣ ಅದು ಬಿದ್ದು ಹೋಗಿ ಮತ್ತೆ ಪುನರ್‌ಪ್ರತಿಷ್ಠೆಗೊಳ್ಳಲಿರುವ ದೇವಸ್ಥಾನಗಳ ಗರ್ಭ ಗುಡಿ ನಿರ್ಮಾಣ ಮಾಡುವ ಮುನ್ನ ಭೂ ಶುದ್ಧಿ ಹಾಗೂ ದೋಷ ಪರಿಹಾರವಾಗಿ ಸಾನಿಧ್ಯವಿದ್ದ ಜಾಗವನ್ನು ಈ ರೀತಿ ಭೂಕರ್ಷಣ ನಡೆಸಿ ಬೀಜವಾಪ ಅಂದರೆ ಭೂಮಿಯನ್ನು ಉಳುಮೆ ಮಾಡಿ ಧಾನ್ಯಗಳನ್ನು ಬಿತ್ತುವ ಕ್ರಮವಿದೆ.

ಬಿತ್ತಿದ ಧಾನ್ಯಗಳಲ್ಲಿ ಫಸಲು ಬಂದ ನಂತರ ಅದನ್ನು ಕ್ಷೇತ್ರದ ದೇವರಿಗೆ ಅರ್ಪಿಸಿ ಗೋ-ಬ್ರಾಹ್ಮಣರಿಗೆ ಸಮರ್ಪಿಸುವ ಕ್ರಮವಿದೆ. ಬೀಜವಾಪ ನಡೆಸಿದ ಜಾಗದಲ್ಲಿ ಗೋವುಗಳನ್ನು ಕಟ್ಟಿ ಭೂಶುದ್ಧಿ ನಡೆಸಿದ ಬಳಿಕ ಮನುಷ್ಯ ಪ್ರಮಾಣ(ಸುಮಾರು ಐದಡಿ) ಅಥವಾ ಕಲ್ಲು-ಜಲ ಸಿಗುವವರೆಗೆ ಅಗೆದು ವಾಸ್ತು ಪ್ರಕ್ರಿಯೆ, ಷಡಾದಾರ, ಪಾದುಕನ್ಯಾಸ ಇತ್ಯಾದಿ ವಿಧಿವಿಧಾನಗಳನ್ನು ನಡೆಸಿ ಸಾನಿಧ್ಯ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ.

ಅದರ ಪೂರ್ವಭಾವಿಯಾಗಿ ಇಂದು(ಜು.೧೨) ಭೂಕರ್ಷಣ ಬೀಜಾವಾಪ ನಡೆಸಿ ಸಾನಿಧ್ಯ ನಿರ್ಮಾಣ ಮಾಡಲು ಮುಂದಡಿ ಇಡಲಾಯಿತು.

ಹೋರಿಗಳನ್ನು ತಂದಿದ್ದ ಯಜಮಾನರಿಗೆ ದೇವರ ಸನ್ನಿಧಿಯಲ್ಲಿ ಪ್ರಾರ್ತಿಸಿ ತಂತ್ರಿಗಳು ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣದ ನೇತೃತ್ವ ವಹಿಸಿದ ಮುಂದಾಳುಗಳು, ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *