ಕೊಯಿಲ: ಸರ್ಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಮರುಪರೀಕ್ಷೆ 12 ಹೆಚ್ಚುವರಿ ಅಂಕ ಗಳಿಕೆ ಸಾಧನೆ
ಬಂಟ್ವಾಳ:ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಗಣಿತ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದ ವಿದ್ಯಾರ್ಥಿನಿ ಮನಿಷಾ ಎಸ್. ಇವರು ಮರು ಪರೀಕ್ಷೆ ಬರೆದು 12 ಹೆಚ್ಚುವರಿ ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 625ರಲ್ಲಿ 590 ಅಂಕ ಗಳಿಸಿದ್ದ ಈಕೆಗೆ ಕನ್ನಡ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಸರಾಸರಿ 90 ರಿಂದ 96 ಅಂಕ ದೊರೆತು ಗಣಿತ ವಿಷಯದಲ್ಲಿ ಮಾತ್ರ ಕೇವಲ 83 ಅಂಕ ಸಿಕ್ಕಿತ್ತು. ಇದರಿಂದಾಗಿ ಮರು ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಗೆ ಶಿಕ್ಷಕರು ಮತ್ತು ಆಕೆಯ ಹೆತ್ತವರು ಪ್ರೋತ್ಸಾಹ ನೀಡಿ, ಈಚೆಗೆ ನಡೆದ ಮರು ಪರೀಕ್ಷೆ ಎದುರಿಸಿ ಗಣಿತ ವಿಷಯದಲ್ಲಿ 95 ಅಂಕ ದೊರೆತಿದೆ. ಇದೀಗ 12 ಹೆಚ್ಚುವರಿ ಅಂಕದಿಂದ ಒಟ್ಟು 625ರಲ್ಲಿ 602 ಅಂಕ ಗಳಿಸುವ ಸಾಧನೆ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ ಎಂದು ಮುಖ್ಯಶಿಕ್ಷಕಿ ಸೌಮ್ಯಾ ತಿಳಿಸಿದ್ದಾರೆ. ಈಕೆ ರಾಯಿ ಸಮೀಪದ ಬೊಲ್ಲುಕಲ್ಲುಗುಡ್ಡೆ ನಿವಾಸಿ, ರಿಕ್ಷಾ ಚಾಲಕ ಸುರೇಶ ಪೂಜಾರಿ ಮತ್ತು ವಿಜಯಾ ದಂಪತಿ ಪುತ್ರಿ.