ತಾರೆಮಾರ್ ಸೈಟ್ ನಲ್ಲಿ ಈ ಬಾರಿಯೂ ಗುಡ್ಡ ಕುಸಿತ#ಆತಂಕದಲ್ಲಿ ಮನೆಮಂದಿ
ಕೈಕಂಬ: ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರೆಮಾರ್ ಸೈಟ್ ನಲ್ಲಿ ಈ ಬಾರಿಯೂ ಗುಡ್ಡ ಕುಸಿತವಾಗಿದ್ದು, ಇಲ್ಲಿನ ೧೧ ಮನೆಗಳಿಗೆ ಕುಸಿತದ ಆತಂಕ ಎದುರಾಗಿದೆ.ಬಂಟ್ವಾಳ-ನೋಣಾಲು-ಗಂಜಿಮಠ ರಾಜ್ಯ ಹೆದ್ದಾರಿಯಲ್ಲಿ ತಾರೆಮಾರ್ ಎಂಬಲ್ಲಿ ಎತ್ತರದ ಗುಡ್ಡದಲ್ಲಿ ಸೈಟ್ ಗಳಲ್ಲಿ ಇರುವ ಮನೆಗಳ ನಿವಾಸಿಗಳು ಆತಂಕಂದಿಂದಲೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಕಳೆದ ಬಾರಿಯ ಮಳೆಗೆ ಇಲ್ಲಿ ಗುಡ್ಡ ಕುಸಿತವಾಗಿತ್ತು. ಈ ಬಾರಿ ಸುರಿದ ಮಳೆಗೆ ಮತ್ತೆ ಕುಸಿತವಾಗಿದೆ.

ಕಳೆದ ಬಾರಿ ಕುಸಿತವಾದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಸಲ ಅದಕ್ಕಿಂತ ಸ್ವಲ್ಪ ದೂರದಲ್ಲಿ ಕುಸಿತವಾಗಿದೆ. ಎರಡು ವರ್ಷಗಳ ಹಿಂದೆ ನೋಣಾಲು ಎಂಬಲ್ಲಿಂದ ಗಂಜಿಮಠವರೆಗಿನ ರಾಜ್ಯ ಹೆದ್ದಾರಿ ಆಗಲೀಕರಣ ಕಾಮಗಾರಿ ವೇಳೆ ತಾರೆಮಾರ್ ಎಂಬಲ್ಲಿ ಅವೈಜ್ಞಾನಿಕವಾಗಿ ಗುಡ್ಡವನ್ನು ಅಗೆದ ಪರಿಣಾಮ ಇಲ್ಲಿ ಕುಸಿತವಾಗಳು ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇಲ್ಲಿನ ೧೧ ಮನೆಗಳಿಗೆ ಸುರಕ್ಷಿತ ಸ್ಥಳಗಳಿಗೆ ಅಥವಾ ಗುರುಪುರದಲ್ಲಿರುವ ಸಂತ್ರಸ್ತರ ಕೇಂದ್ರಗಳಿಗೆ ತೆರಳುವಂತೆ ನೋಟೀಸು ನೀಡಲಾಗಿದೆ. ಆದರೆ ಅಲ್ಲಿಗೆ ತೆರಳಲು ಇಲ್ಲಿನ ನಿವಾಸಿಗಳು ನಿರಾಕರಿಸಿದ್ದಾರೆ.

ಇಲ್ಲಿ ಅಂದಾಜು ೨೦೦ ಮೀಟರ್ ಉದ್ದಕ್ಕೆ ಹತ್ತು ಮೀಟರ್ ಎತ್ತರಕ್ಕೆ ತಡೆಗೋಡೆ ನಿರ್ಮಿಸಬೇಕಾಗಿದೆ.ನಿರಂತರವಾಗಿ ಸುರಿದ ಮಳೆಗೆ ಗುಡ್ಡ ಕುಸಿತವಾಗಿ ರುಕ್ಮಿಣಿ ಎಂಬವರ ಮನೆ ಅಪಾಯಕ್ಕೆ ಸಿಲುಕಿದ್ದು, ಮಳೆ ಇನ್ನಷ್ಟು ಮುಂದುವರಿದಲ್ಲಿ ಇಲ್ಲಿ ಮತ್ತಷ್ಟು ಕುಸಿತವಾಗಲಿದೆ.ಸೈಟ್ ನಲ್ಲಿ ವ್ಯವಸ್ಥಿತವಾದ ಚರಂಡಿ ಇಲ್ಲದೇ ಅಡ್ಡಾದಿಡ್ಡಿಯಾಗಿ ಮನೆಗಳನ್ನು ಕಟ್ಟಿಕೊಂಡ ಕಾರಣ ಮಳೆ ನೀರು ಸಿಕ್ಕಸಿಕ್ಕಲ್ಲಿ ಹರಿದು ಹೋಗುವುದು ಕೂಡಾ ಇಲ್ಲಿ ಗುಡ್ಡ ಕುಸಿತಕ್ಕೆ ಬಲ ನೀಡುತ್ತಿದೆ.
” ರಸ್ತೆ ಆಗಲೀಕರಣದ ಸಂಧರ್ಭ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಕಾರಣ ಇಲ್ಲಿ ಕುಸಿತವಾಗುತ್ತಿದೆ. ಗುಡ್ಡ ಅಗೆಯದಂತೆ ಜೆಸಿಬಿಗೆ ಅಡ್ಡ ನಿಂತು ಆಕ್ಷೇಪ ವ್ಯಕ್ತಪಡಿಸಿದರೂ ನಮ್ಮ ಮಾತನ್ನು ಧಿಕ್ಕರಿಸಿ ಗುಡ್ಡ ಅಗೆದಿದ್ದಾರೆ. ಇದರ ಪರಿಣಾಮ ಈಗ ನಾವು ಅನುಭವಿಸಬೇಕಾಗಿದೆ. ಗುರುಪುರದ ಸಂತ್ರಸ್ತರ ಕೇಂದ್ರಕ್ಕೆ ಅಥವಾ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ನೋಟೀಸ್ ನೀಡಿದ್ದಾರೆ. ನಮ್ಮ ಮಕ್ಕಳು ಇಲ್ಲಿನ ಶಾಲೆ, ಅಂಗನವಾಡಿಗಳಿಗೆ ಹೋಗುತ್ತಿದ್ದಾರೆ. ಅಲ್ಲದೇ ಉದ್ಯೋಗ ಮತ್ತಿತರ ವಿಚಾರಗಳಲ್ಲಿ ನಮಗೆ ಬೇರೆಡೆಗೆ ಹೋದರೆ ಸಮಸ್ಯೆಯಾಗುತ್ತದೆ. ಇಲ್ಲಿ ತಡೆಗೋಡೆ ನಿರ್ಮಿಸಿಕೊಡಬೇಕು”
ಶ್ರೀಮತಿ ರುಕ್ಮಿಣಿ, ನಿವಾಸಿ ಮತ್ತು ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರು.

” ಇಲ್ಲಿ ಸುಮಾರು ೨೦೦ ಮೀಟರ್ ಉದ್ದ ಮತ್ತು ಹತ್ತು ಮೀಟರ್ ಎತ್ತರ ತಡೆಗೋಡೆ ನಿರ್ಮಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸಂತ್ರಸ್ತರ ಜತೆ ಹೋಗಿ ಮನವಿ ನೀಡಲಾಗಿದೆ.ಅಂದಾಜು ೫೦ ಲಕ್ಷದಿಂದ ಒಂದು ಕೋಟಿ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ತಹಸೀಲ್ದಾರ್ ಸಹಿತ ಇನ್ನಿತರ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆ ಸಿಕ್ಕಿದೆ:-

ಚಂದ್ರಹಾಸ್ ಶೆಟ್ಟಿ ಮುತ್ತೂರು, ಕಾಂಗ್ರೇಸ್ ಮುಖಂಡರು, ಕುಪ್ಪೆಪದವು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು.