Published On: Wed, Jul 10th, 2024

ಶ್ರೀಕ್ಷೇತ್ರ ದೇವರ ಗುಡ್ಡೆ: ಜುಲೈ ೧೨ರಂದು ಭೂಕರ್ಷಣಾದಿಯಾಗಿ ಉಳುಮೆ-ಬಿತ್ತನೆ

ಕೈಕಂಬ : ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ(ಮಣೇಲ್) ದೇವರಗುಡ್ಡೆ ಶ್ರೀಸೂರ್ಯನಾರಾಯಣ ಹಾಗೂ ಪರಿವಾರ ದೇವರ ಗರ್ಭಗುಡಿ ನಿರ್ಮಾಣದ ಪೂರ್ವಭಾವಿಯಾಗಿ ಜುಲೈ ೧೨ರಂದು ಗಣಪತಿ ಹೋಮ, ಪ್ರಾರ್ಥನೆ, ಪುಣ್ಯಾಹ ಹಾಗೂ ಭೂಕರ್ಷಣಾದಿಯಾಗಿ ಭೂಮಿಯನ್ನು ಉಳುಮೆ ಮಾಡಿ ಧಾನ್ಯಗಳ ಬಿತ್ತನೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ವೇದಮೂರ್ತಿ ಪೊಳಲಿ ಶ್ರೀಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ

.
ದೇವಸ್ಥಾನವಿದ್ದಿದ್ದ ವಠಾರವನ್ನು ಈಗಾಗಲೇ ಸಮತಟ್ಟುಗೊಳಿಸಲಾಗಿದ್ದು, ಹಲವು ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಂಡು ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕೆರೆ ಶೋಧನೆ ನಡೆಸಲಾಗಿದೆ. ಗರ್ಭಗುಡಿ ಹಾಗೂ ಸುತ್ತು ಪೌಳಿಯ ಸೂಕ್ತ ಜಾಗವನ್ನು ವಾಸ್ತು ತಜ್ಞರು ಈಗಾಗಲೇ ಗುರುತಿಸಿದ್ದಾರೆ. ಗರ್ಭಗುಡಿ ನಿರ್ಮಾಣದ ಪೂರ್ವಭಾವಿಯಾಗಿ ಜುಲೈ ೧೨ರಂದು ಭೂಕರ್ಷಣಾದಿಯಾಗಿ ಉಳುಮೆ ಹಾಗೂ ಧಾನ್ಯ ಬಿತ್ತನೆಯಂಥಾ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಅಂದು ಎರಡು ಹೋರಿಗಳಿಗೆ ನೊಗ- ನೇಗಿಲು ಕಟ್ಟಿ ಪೂಜೆ ಮಾಡಿ, ಗರ್ಭ ಗುಡಿಯ ಜಾಗವನ್ನು ಉಳುಮೆ ಮಾಡಲಾಗುತ್ತದೆ. ಹಸನು ಮಾಡಿದ ನೆಲದಲ್ಲಿ ಹೆಸರು, ಎಳ್ಳು, ಹುರುಳಿ ಹಾಗೂ ರಕ್ಷೆಗಾಗಿ ಸಾಸಿವೆ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ.


ಕೆಲವು ತಿಂಗಳ ನಂತರ ಇದರಲ್ಲಿ ಬರುವ ಫಸಲನ್ನು ಗೋವುಗಳಿಗೆ ಗೋಗ್ರಾಸ ಕೊಟ್ಟು, ದೇವರು ಹಾಗೂ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ, ಇದೇ ಫಸಲಿನಿಂದ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಆನಂತರ ಭೂಮಿಯನ್ನು ಸುಮಾರು ಐದಡಿಯಷ್ಟು ಆಳ ಅಗೆದು ಗರ್ಭಗುಡಿಯ ಕಾರ್ಯಗಳನ್ನು ಆರಂಭಿಸಲಾಗುತ್ತದೆ.

ಇದಕ್ಕೆ ಭೂಕರ್ಷಣಾ ಎಂದು ಕರೆಯಲಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ದೇವಸ್ಥಾನ ಬಿದ್ದು ಹೋಗಿ ಹಡೀಲು ಬಿದ್ದಿರುವುದರಿಂದ ಜಾಗದ ದೋಷ ಪರಿಹಾರಾರ್ಥವಾಗಿ ಭೂಮಿಯನ್ನು ಶುದ್ಧಗೊಳಿಸುವ ಸಲುವಾಗಿ ಈ ಧಾರ್ಮಿಕ ವಿಧಾನಗಳನ್ನು ನಡೆಸಲಾಗುತ್ತದೆ.

ಇತಿಹಾಸ: ಹದಿಮೂರನೇ ಶತಮಾನದಲ್ಲಿ ಅಳುಪ ರಾಜವಂಶದ ದೊರೆ ರಾಜ ಕುಲಶೇಖರ ಈ ಪ್ರದೇಶದಲ್ಲಿ ಗಣಪತಿ ಹಾಗೂ ಪರಿವಾರ ದೇವತೆಗಳ ಸಹಿತ ಸೂರ್ಯನಾರಾಯಣ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದ್ದು, ಕಾಲಕ್ರಮೇಣ ೩೦೦ರಿಂದ ೪೦೦ ವರ್ಷಗಳ ಹಿಂದೆ ನಿರ್ನಾಮ ಹೊಂದಿದ್ದರೂ ‘ದೇವರ ಗುಡ್ಡೆ’ ಎಂಬ ಹೆಸರಿನಿಂದ ಈ ಪ್ರದೇಶ ಹೆಸರುವಾಸಿಯಾಗಿದೆ. ಇದು ರಥೋತ್ಸವ, ಐದು ದಿನಗಳ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದ ದೇವಸ್ಥಾನವಾಗಿತ್ತೆಂದು ಇತಿಹಾಸ, ಪ್ರಶ್ನಾ ಚಿಂತನೆ ಹಾಗೂ ಅಷ್ಠಮಂಗಳದಿಂದ ಕಂಡುಕೊಳ್ಳಲಾಗಿದೆ.
ಕೆಳದಿ ಅರಸರ ಕಾಲದಲ್ಲಿ ಪುತ್ತಿಗೆ ಚೌಟ ಅರಸರ ವಂಶದ ರಾಣಿ ಅಬ್ಬಕ್ಕಳ ಕಾರ್ಯಕ್ಷೇತ್ರ ಮಣೇಲ್(ಮಳಲಿ) ಆಗಿದ್ದು, ಹತ್ತಿರದ ಜೈನ ಬಸದಿ ಹಾಗೂ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಳು. ಇದು ರಾಣಿಯ ಅರಮನೆಯ ಉತ್ತರ ಭಾಗದಲ್ಲಿತ್ತು ಎನ್ನುವುದು ಇತಿಹಾಸದಿಂದ ತಿಳಿದು ಬಂದಿದೆ.


ಇತ್ತೀಚೆಗೆ ದೇವಸ್ಥಾನವಿದ್ದ ಜಾಗವನ್ನು ಸಮತಟ್ಟುಗೊಳಿಸಿದಾಗ ಚಚ್ಚೌಕಾಕಾರದ ಬೃಹತ್ ಕೆಂಪು ಕಲ್ಲುಗಳು, ಇಟ್ಟಿಗೆಗಳು, ಹೆಂಚುಗಳು, ಹಣತೆಗಳು ಹಾಗೂ ಕೆರೆ ಶೋಧನೆ ನಡೆಸಿದಾಗ ಅದರಲ್ಲಿ ನೀರು ಉಕ್ಕಿ ಬಂದಿದೆ. ಅಲ್ಲದೆ ಕೆರೆಗೆ ಬಳಸಿರಬಹುದೆನ್ನಲಾದ ಕೆಂಪು ಕಲ್ಲುಗಳು ಸಹ ಪತ್ತೆಯಾಗಿದೆ. ಇದೀಗ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಅರ್ಚಕರಿಂದ ಪೂಜೆ ಪುನಸ್ಕಾರಗಳು, ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಕೆಲವೇ ತಿಂಗಳಲ್ಲಿ ಇಲ್ಲಿ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter