ಮುತ್ತೂರು ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ
ಕೈಕಂಬ: ಮುತ್ತೂರು ಮತ್ತು ಕೊಳವೂರು ಗ್ರಾಮಗಳನ್ನು ಒಳಗೊಂಡ ಮುತ್ತೂರು ಗ್ರಾಮ ಪಂಚಾಯತ್ ನ ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸೋಮವಾರ ನಡೆಯಿತು.ಕುಪ್ಪೆಪದವು ಗ್ರಾಮ ಪಂಚಾಯತ್ ನ ದೊಡ್ಡಳಿಕೆ ಎಂಬಲ್ಲಿAದ ಮುತ್ತೂರು ಗ್ರಾಮ ಪಂಚಾಯತ್ ನ ನೋಣಾಲು ವರೆಗಿನ ನೀರಾವರಿ ಕಾಲುವೆಯ ಬದಿಯಲ್ಲಿ ಸುಮಾರು ೮ ಕಿಲೋಮೀಟರ್ ಮೀಟರ್ ವರೆಗೆ ರಸ್ತೆ ನಿರ್ಮಿಸುವ ಬಗ್ಗೆ ಅಲ್ಲದೇ ಕಾಲುವೆಯನ್ನು ಸರ್ವೇ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಭಾರೀ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ಕುಲವೂರು ಕಾಲುವೆ ಬದಿಯಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ೨೦೧೮ರಲ್ಲಿಯೇ ಸಣ್ಣ ನೀರಾವರಿ ಇಲಾಖೆ ಸೂಚನೆ ನೀಡಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದಾಗ ಕೆಲವು ಸ್ಥಳಗಳಲ್ಲಿ ಕಾಮಗಾರಿ ನಡೆದಿದ್ದು ಹೇಗೆ ಎಂದು ದಯಾನಂದ ಶೆಟ್ಟಿ ಪ್ರಶ್ನಿಸಿದಾಗ ಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಕಾಮಗಾರಿ ನಡೆಸಲು ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯನ್ನು ಸಭೆಯಲ್ಲಿ ಓದಿ ಬಳಿಕ ಕಾಲುವೆಯ ೮ ಕಿಲೋಮೀಟರ್ ಉದ್ದಕ್ಕೆ ರಸ್ತೆ ನಿರ್ಮಾಣ ಮತ್ತು ಕಾಲುವೆಯ ಸಂಪೂರ್ಣ ಸರ್ವೇ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯತ್ ವ್ಯಾಪ್ತಿಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೂ ಕೃಮ ಕೈಗೊಂಡಿಲ್ಲ ಎಂದು ದಯಾನಂದ ಶೆಟ್ಟಿಯವರು ಮಂಗಳೂರು ಪೂರ್ವ ವಲಯ ಅಬಕಾರಿ ನಿರೀಕ್ಷಕಿ ಸುಮಾ ಜಿ.ಎಂ. ಉತ್ತರಿಸಿ ನಾವು ಬಂದಾಗ ಎಲ್ಲೂ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಕಂಡುಬದಿಲ್ಲ ಎಂದರು. ನೀವು ಯುನಿಫಾರ್ಮ್ ನಲ್ಲಿ ಬಂದರೆ ನೀವು ಬರುವ ಮಾಹಿತಿ ಮೊದಲೇ ಮದ್ಯ ಮಾರುವವರಿಗೆ ಸಿಗುತ್ತದೆ ನೀವು ಮಾರುವೇಷದಲ್ಲಿ ಬನ್ನಿ ನಿಮ್ಮ ಮಾಹಿತಿ ಮೂಲಗಳಿಗಿಂತ ಮದ್ಯ ಮಾರಾಟ ಮಾಡುವವರ ಮಾಹಿತಿ ಮೂಲಗಳು ಹೆಚ್ಚು ಪ್ರಬಲವಾಗಿವೆ ಎಂದು ಗ್ರಾಮಸ್ಥರು ಅಬಕಾರಿ ಇಲಾಖೆಯ ವೈಫಲ್ಯವನ್ನು ಬಿಚ್ಚಿಟ್ಟರು.
ಮುತ್ತೂರು ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನ ಕೊಠಡಿ ನಿರ್ಮಾಣವಾಗುತ್ತಿದ್ದು, ಶಾಲೆಯ ಮೈದಾನದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಅದರ ಬದಲಾಗಿ ಮೈದಾನದ ಅಂಚಿನಲ್ಲಿ ಪಿಲ್ಲರ್ ಹಾಕಿ ಕೊಠಡಿ ನಿರ್ಮಾಣ ಮಾಡಿದರೆ ಶಾಲಾ ಮೈದಾನದ ಜಾಗ ಉಳಿಯುತ್ತದೆ ಈ ಬಗ್ಗೆ ಶಾಲಾಡಳಿತ ಗಮನ ಹರಿಸಿಲ್ಲ ಎಂದು ಹರಿಯಪ್ಪ ಮುತ್ತೂರು ಹೇಳಿದಾಗ ಉತ್ತರ ನೀಡಿದ ಜಿಲ್ಲಾ ಪಂಚಾಯತ್ ಇಂಜಿನಿಯರ್ ಪಿಲ್ಲರ್ ಹಾಕಿ ಕಟ್ಟಡ ನಿರ್ಮಿಸಲು ಕೋಟಿ ಹಣ ಬೇಕಾಗಬಹುದು ಆದರೆ ನಮಗೆ ಕೇವಲ ಕೊಠಡಿ ನಿರ್ಮಾಣಕ್ಕೆ ಮಾತ್ರ ಅನುದಾನ ಬಂದಿದೆ ಎಂದರು.
ಗ್ರಾಮ ಪಂಚಾಯತ್ ನಿವೇಶನ ಹಂಚಿಕೆ ಮಾಡುವ ಸಂಧರ್ಭ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಿ ನಿವೇಶನ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು.
ಬಡಕಾಯಿ ಬೆಟ್ಟು-ನೋಣಾಲು ಸಂಪರ್ಕ ರಸ್ತೆಯಲ್ಲಿ ಖಾಸಗಿ ಜಾಗದವರು ಗೇಟು ಹಾಕಿದ್ದಾರೆ.ರಸ್ತೆ ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗುತ್ತಿಲ್ಲ ಗೇಟು ತೆರವು ಮಾಡಬೇಕು ಅಥವಾ ಖಾಸಗಿ ಜಾಗದಲ್ಲಿ ಸರಕಾರದ ಹಣ ಬಳಸಿ ಡಾಮಾರು ಹಾಕಿದ್ದು ಯಾಕೆ ಎಂದು ದಯಾನಂದ ಶೆಟ್ಟಿ ಪ್ರಶ್ನಿಸಿದರು.
ತಾರೆಮಾರ್ ಸೈಟ್ ಎಂಬಲ್ಲಿ ಗುಡ್ಡ ಕುಸಿದು ಮನೆಗಳಿಗೆ ಅಪಾಯ ಎದುರಾಗಿದ್ದು ಪರ್ಯಾಯ ವ್ಯವಸ್ಥೆ ಮಾಡುವಂತೆ ಅಲ್ಲಿನ ನಿವಾಸಿಗಳ ಬೇಡಿಕೆಗೆ ಉತ್ತರಿಸಿದ ಅಧ್ಯಕ್ಷ ಪ್ರವೀಣ್ ಆಳ್ವ ಕುಸಿಯುವ ಭೀತಿ ಇರುವಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ ಬೇರೆ ಜಾಗ ಕೊಡುವ ಬಗ್ಗೆಯೂ ಮನವಿ ಮಾಡಲಾಗಿದೆ ಎಂದರು. ಸ್ಥಳೀಯ ಪಂಚಾಯತ್ ಸದಸ್ಯೆಯೆ ಮಣ್ಣು ಅಗೆದ ಪರಿಣಾಮ ನಮ್ಮ ಮನೆಗೆ ಅಪಾಯ ಎದುರಾಗಿದೆ ಎಂದು ಮಹಿಳೆಯೊಬ್ಬರು ನೇರ ಆರೋಪ ಮಾಡಿದರು.
ಪ್ರಸ್ತುತ ನಡೆಯುತ್ತಿರುವ ಸೈಬರ್ ಅಪರಾಧಗಳು ಮತ್ತು ಆನ್ ಲೈನ್ ವಂಚನೆ ಬಗ್ಗೆ ಜಾಗ್ರತೆ ವಹಿಸಬೇಕು ಅಂತಹ ಸಂಧರ್ಭ ಪೊಲೀಸರಿಗೆ ದೂರು ನೀಡುವಂತೆ ಪೊಲೀಸ್ ಇಲಾಖೆಯ ಪರವಾಗಿ ಭಾಗವಹಿಸಿದ್ದ ಬೀಟ್ ಪೊಲೀಸ್ ಕೆಂಚಪ್ಪ ಮಾಹಿತಿ ನೀಡಿದರು.
ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಖಚಿತವಾದಲ್ಲಿ ಈ ಬಗ್ಗೆ ಕೃಮ ಕೈಗೊಳ್ಳಲಾಗುವುದಾಗಿ ಕಂದಾಯ ನಿರೀಕ್ಷಕ ಪೂರ್ಣಚಂದ್ರ ಭರವಸೆ ನೀಡಿದರು.
ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಅರೋಗ್ಯ ಇಲಾಖೆಯ ಪರವಾಗಿ ಕುಪ್ಪೆಪದವು ಅರೋಗ್ಯ ಕೇಂದ್ರದ ಡಾ. ಕಿರಣ್ ಕುಮಾರ್, ಶಿಕ್ಷಣ ಇಲಾಖೆಯ ಪುಷ್ಪಾವತಿ, ಮುತ್ತೂರು ಕೆಪಿಎಸ್ ಶಾಲೆಯ ರಘುರಾಮ್, ಗ್ರಾಮಕರಣಿಕ ಮುತ್ತಪ್ಪ, ಮಕ್ಕಳ ಮತ್ತು ಮಹಿಳಾ ಇಲಾಖೆಯ ಮಾಲಿನಿ, ಮೆಸ್ಕಾಂ ಎಡಪದವು ಸೆಕ್ಷನ್ ಅಧಿಕಾರಿ ವೀರಭದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಭಾಗ್ಯವತಿ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಮಹಾಲಕ್ಷ್ಮಿ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ಪಂಚಾಯತ್ ಉಪಾಧ್ಯಕ್ಷೆ ಸುಷ್ಮಾ ಸಂತೋಷ್ ,ಪಂಚಾಯತ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಅಂಗನವಾಡಿ ಮತ್ತು ಆಶಾ ಕಾರ್ಯಕತೆಯರು, ಅರೋಗ್ಯ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ನಾಯ್ಕ್ ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. ಕಾರ್ಯದರ್ಶಿ ವಸಂತಿ ವರದಿ ಮಂಡಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.