ನೇತ್ರಾವತಿ ನದಿಮಾಲಿನ್ಯ ” ನೀರ ದಾರಿಯ ನಡೆ” ಪಾದಯಾತ್ರೆ
ಬಂಟ್ವಾಳ: ಸಂವಾದ ಯುವ ಮುನ್ನಡೆ ತಂಡದಿಂದ ನೇತ್ರಾವತಿ ನದಿ ಮಾಲಿನ್ಯದ ಕುರಿತು “ನೀರ ದಾರಿಯ ನಡೆ” ಪಾದಯಾತ್ರೆಗೆ ಬಡ್ಡಕಟ್ಟೆಯ ನದಿ ತೀರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಸಾಮಾಜಿಕ ಕಾರ್ಯಕರ್ತ ಪ್ರಭಾಕರ ದೈವಗುಡ್ಡೆ ಅವರು ಪಾದಯಾತ್ರೆಗೆ ಚಾಲನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರನ್ನು ಒದಗಿಸುವ ಪವಿತ್ರವಾದ ನೇತ್ರಾವತಿ ನದಿಯನ್ನು ಮಾಲಿನ್ಯ ಮಾಡುತ್ತಿರುವುದು, ತ್ಯಾಜ್ಯಗಳನ್ನು ತಂದು ನದಿಗೆ ಸುರಿಯುವುದು, ಕೊಳಚೆ ನೀರು ನದಿಗೆ ಬಿಡುವುದು ಅಕ್ಷಮ್ಯವಾಗಿದೆ ಎಂದು ಅವರು ತಿಳಿಸಿದರಲ್ಲದೆ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ಬಡ್ಡಕಟ್ಟೆ, ಬಂಟ್ವಾಳ ಪೇಟೆಯಲ್ಲಿ ಸಾರ್ವಜನಿಕರ ಜೊತೆ ನೇತ್ರಾವತಿ ನದಿ ಮಾಲಿನ್ಯದ ಬಗ್ಗೆ ಮಾತುಕತೆ,ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನದಿ ಮಾಲಿನ್ಯ ಮತ್ತು ಕಾನೂನಿನ ಬಗ್ಗೆ ಸಂವಾದ ನಡೆಸಲಾಯಿತು.
ವೈಯಕ್ತಿಕ ಸ್ವಚ್ಛತೆ ಜೊತೆಗೆ ಸಾಮಾಜಿಕ ಸ್ವಚ್ಛತೆ ಕಡೆ ಗಮನ ಕೊಡಬೇಕಿದೆ ಎಂದು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್ ತಿಳಿಸಿದರು. ಎಸ್ .ಐ.ಗಳಾದ ಹರೀಶ್,ಮೂರ್ತಿ ಉಪಸ್ಥಿತರಿದ್ದರು.
ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳ ಭೇಟಿ, ನಂದಾವರ ದೇವಸ್ಥಾನದ ಅರ್ಚಕರ ಜೊತೆ ನೇತ್ರಾವತಿ ನದಿ ಮತ್ತು ದೇವಸ್ಥಾನದ ಸಾಂಸ್ಕೃತಿಕ ಬೆಸುಗೆಯ ಬಗ್ಗೆ ಮಾತುಕತೆ, ಇನೋಳಿ ಸೋಮನಾಥ ದೇವಾಲಯದ ಬೆಟ್ಟದ ಮೇಲಿನಿಂದ ನೇತ್ರಾವತಿ ಹರಿಯುವ ವಿಹಂಗಮ ನೋಟದ ವೀಕ್ಷಣೆ ಮೊದಲ ದಿನದ ಪಾದಯಾತ್ರೆಯಲ್ಲಿ ನಡೆಸಲಾಯಿತು.
ಮಲ್ಲಿಕಾ ಜ್ಯೋತಿಗುಡ್ಡೆ ಹಾಗೂ ವೇಣುಗೋಪಾಲ ಪರಿಸರಕ್ಕೆ ಸಂಬಂಧಿಸಿದ ಆಶಯ ಗೀತೆಯನ್ನು ಹಾಡಿದರು. ಯುವ ಮುಂದಾಳು ಶ್ರೇಯಾ ಪ್ರಸ್ತಾವನೆಗೈದರು.ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.