ಅಕ್ಟಿವಾಕ್ಕೆ ಲಾರಿಡಿಕ್ಕಿ: ಸವಾರನ ದಾರುಣ ಮೃತ್ಯು
ಬಂಟ್ವಾಳ:ಶನಿವಾರ ಸಂಜೆ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ಸಂಜೆ ದ್ವಿಚಕ್ರವಾಹನಕ್ಕೆ ಈಚರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ರಾಮನಾಯ್ಕ ( 47) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಬಂಟ್ವಾಳ ಬೈಪಾಸ್ ನಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಸೌಮ್ಯ ಸ್ವಭಾವದ ವ್ಯಕ್ತಿತ್ವ,ಗ್ರಾಹಕಸ್ನೇಹಿಯಾಗಿದ್ದರು. ತನ್ನ ವಯಕ್ತಿಕ ಕೆಲಸದ ನಿಮಿತ್ತವಾಗಿ ಮುಡಿಪು ಕಡೆಗೆ ತನ್ನ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಕಂದೂರು ಬಳಿ ಹಿಂಬದಿಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಧಾವಿಸಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸಹಿತ ರಸ್ತೆಗೆ ಬಿದ್ದು ತಲೆಗೆ ಗಂಭೀರವಾದ ಗಾಯಗೊಂಡಿದ್ದು,ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ದಾರುಣವಾಗಿ ಮೃತಪಟ್ಟಿದ್ದಾರೆ.ಸುಮಾರು ಅರ್ಧ ತಾಸಿನವರೆಗೂ ಇವರ ಮೃತದೇಹ ರಸ್ತೆಯ ಮಧ್ಯ ಭಾಗದಲ್ಲಿದ್ದು,
ಸಂಚಾರಿ ಪೋಲೀಸರು ಸ್ಥಳಕ್ಕೆ ಬರುವವರೆಗೂ ಯಾರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಿಲ್ಲ, ಬಂಟ್ವಾಳ ಸಂಚಾರಿ ಪೊಲೀಸರ ಆಗಮನದ ಬಳಿಕವೇ ಘಟನಾ ಸ್ಥಳದಿಂದ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿದ್ದ ದಾಖಲೆಪತ್ರದ ಆಧಾರದಲ್ಲಿ ಮೃತದೇಹವನ್ನು ಗುರುತಿಸಿ ಮನೆಯವರಿಗೆ ಮಾಹಿತಿನೀಡಲಾಯಿತು.
ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.