Published On: Fri, Jun 7th, 2024

ಕುಂಪನಮಜಲು ಸೇತುವೆಯಡಿ ರಾಶಿ ರಾಶಿ ತ್ಯಾಜ್ಯ

ಪಂಚಾಯತ್‌ನ ಕಸ ಸಂಗ್ರಹಣಾ ವಾಹನಕ್ಕೆ ಸ್ಪಂದಿಸದ ಗ್ರಾಮಸ್ಥರು

ಬಿ.ಸಿ.ರೋಡ್ : ಪುದು ಗ್ರಾಮದಲ್ಲಿ ಅಲ್ಲಲ್ಲಿ ತ್ಯಾಜ್ಯಗಳದ್ದೇ ಕಾರುಬಾರು. ಪುದು ಗ್ರಾಮದ ಮಧ್ಯದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಹೆದ್ದಾರಿಯ ರಸ್ತೆ ಎಲ್ಲಾ ಕಡೆ, ಫರಂಗಿಪೇಟೆ ಹೃದಯ ಭಾಗದಲ್ಲಿರುವ ರೈಲ್ವೇ ಇಲಾಖೆಗೆ ಸೇರಿದ ಸ್ಥಳ, ಫರಂಗಿಪೇಟೆ-ಕುಂಪನಮಜಲು ರಸ್ತೆಗೆ ಹೋಗುವ ರೈಲ್ವೇ ಕ್ರಾಸಿಂಗ್ ನಂತರ ಸಿಗುವ ಸೇತುವೆ ಬುಡದಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ.

ಫರಂಗಿಪೇಟೆ ನಗರದ ಒಂದು ಬದಿಯಲ್ಲೇ ರೈಲ್ವೇ ಇಲಾಖೆಗೆ ಸೇರಿದ ಸ್ಥಳವೇ ಹೆಚ್ಚಿನ ಫ್ಲಾಟ್‌ಗಳ ಮನೆಯ ವಾರಸುದಾರರಿಗೆ ಕಸ ಹಾಕುವ ಕೇಂದ್ರ ಸ್ಥಳವಾಗಿ ಪರಿಣಮಿಸಿದೆ. ರೈಲ್ವೇ ಜಾಗದಲ್ಲಿ ಒಂದು ಕಡೆ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ವರದೇಶ್ವರ ದೇವಸ್ಥಾನದ ಬಳಿ ಹೆದ್ದಾರಿಗೆ ಸೇರುವ ರಸ್ತೆಯ ಬದಿಯಲ್ಲಿ ತ್ಯಾಜ್ಯಗಳು ರಾಶಿ ಬಿದ್ದಿವೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ ಸ್ಥಳವನ್ನು ಭದ್ರತೆ ಮಾಡಿ ಕಾಪಾಡುವುದು ರೈಲ್ವೇ ಇಲಾಖೆಯದ್ದಾಗಿದ್ದು, ಮೀನು ಮಾರ್ಕೆಟ್ ಎತ್ತಂಗಡಿ ಮಾಡುವಾಗ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ನಂತರ ಅದನ್ನು ಸುಭದ್ರವಾಗಿಡುವ ಗೋಜಿಗೇ ಹೋಗಲಿಲ್ಲ. ಸಿಸಿ ಕ್ಯಾಮರವನ್ನಾದರೂ ಈ ಪ್ರದೇಶದಲ್ಲಿ ಅಳವಡಿಸಿರುತ್ತಿದ್ದರೆ ತ್ಯಾಜ್ಯ ಎಸೆಯುವವರು ಆ ಕಡೆ ತಲೆ ಹಾಕುತ್ತಿರಲಿಲ್ಲ.

ಸೇತುವೆಯಡಿ ರಾಶಿ ತ್ಯಾಜ್ಯ : ಫರಂಗಿಪೇಟೆ ರೈಲ್ವೇ ಕ್ರಾಸಿಂಗ್ ನಂತರ ಸಿಗುವ ಸೇತುವೆಯಡಿ ರಾಶಿ ತ್ಯಾಜ್ಯಗಳಿದ್ದು ಇನ್ನೇನು ಮಳೆ ನೀರಿಗೆ ನದಿ ಸೇರಲು ಸಿದ್ಧವಾಗಿದೆ. ಈ ರಸ್ತೆಯುದ್ದಕ್ಕೂ ಫ್ಲಾಟುಗಳು ಸಾಲು ಸಾಲಾಗಿದ್ದು ಕಸ ಉತ್ಪತ್ತಿಗೆ ಕಡಿವಾಣವೇ ಇಲ್ಲದಂತಾಗಿದೆ.

ಈಗಿನ ಕಾಲದಲ್ಲಿ ತ್ಯಾಜ್ಯ ಉತ್ಪತ್ತಿಯಾಗದ ಮನೆಗಳಿರುವುದಂಟೇ. ಮಾರ್ಕೆಟ್‌ಗೆ ಹೋಗಿ ಸಾಮಾನು ಖರೀದಿಸಿದರೆ ಎಲ್ಲಾ ಪ್ಲಾಸ್ಟಿಕ್ ಪ್ಯಾಕೇಟ್‌ಗಳು. ಇನ್ನು ತರಕಾರಿ, ಮೀನು ತ್ಯಾಜ್ಯ ಹೀಗೆ ದಿನಂಪ್ರತಿ ಅಡುಗೆ ಮಾಡುವ ಮನೆಯಲ್ಲಿ ತ್ಯಾಜ್ಯ ಉತ್ಪತ್ತಿಯಾಗುವುದು ಸಹಜ. ಆದರೆ ತಮ್ಮ ಮನೆಯಲ್ಲಿ ಉತ್ಪತಿಯಾಗುವ ತ್ಯಾಜ್ಯವನ್ನು ಎಲ್ಲೋ ಒಂದು ಕಡೆ ಎಸೆದು ಬಂದು ಪರಿಸರಕ್ಕೆ ಹಾನಿ ಮಾಡುವ ಬದಲು ಪಂಚಾಯತ್ ವತಿಯಿಂದ ಕಸ ಸಂಗ್ರಹಣ ಮಾಡಲ್ಪಡುವ ವ್ಯವಸ್ಥೆಗೆ ಸಹಕಾರ ನೀಡಿದರೆ ಎಲ್ಲರ ಆರೋಗ್ಯಕ್ಕೆ ಒಳ್ಳೆಯದು.

**

ಪ್ರತೀ ಮನೆ ಮನೆಗೆ ಪ್ರತೀ ವಾರದಲ್ಲಿ ಕಸಗಳನ್ನು ತೆಗೆದುಕೊಳ್ಳಲು ಪಂಚಾಯತ್ ವತಿಯಿಂದ ಗುತ್ತಿಗೆದಾರರ ಮುಖಾಂತರ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿಯೇ ಲಕ್ಷಾಂತರ ಹಣ ಖರ್ಚು ಮಾಡುತ್ತೇವೆ. ಗ್ರಾಮದಲ್ಲಿರುವ ಕೆಲವು ಫ್ಲಾಟುಗಳ ಮನೆಯವರು ಇದಕ್ಕೆ ಸ್ಪಂದಿಸದೇ ರಸ್ತೆ ಬದಿಯಲ್ಲಿ, ನೀರು ಹಾದು ಹೋಗುವ ಸೇತುವೆ ಬದಿಯಲ್ಲಿ ಬಿಸಾಡುತ್ತಾರೆ. ಎಷ್ಟು ಹೇಳಿದರೂ ಅವರಿಗೆ ಕಸ ಬಿಸಾಡುವ ಹವ್ಯಾಸಿವಾಗಿ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಲಾಗುವುದು.

  • ರಶೀದಾ, ಅಧ್ಯಕ್ಷರು, ಪುದು ಗ್ರಾಮ ಪಂಚಾಯತ್

ಬರಹ: ಯಾದವ ಕುಲಾಲ್ ಅಗ್ರಬೈಲು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter