ಜೂ. ೨೧-೩೦ರವರೆಗೆ ಜಪಾನ್‌ನಲ್ಲಿ ೫ನೇ ವಿಶ್ವ ಕಿವುಡರ ಚಾಂಪಿಯನ್‌ಶಿಪ್
ಕರಿಯಂಗಳದ ವಿಶೇಷ ಚೇತನ ಭೂಷಣ್ ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆ

ಕೈಕಂಬ : ಗುರಿಯೊಂದಿಗೆ ಸಾಧನೆಯ ಛಲವೊಂದಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಧನೆಯ ಪಥದಲ್ಲಿ ಮುನ್ನಡೆದರೆ ಅಸಾಧ್ಯವೂ ಸಾಧ್ಯವಾಗುತ್ತದೆ. ವಿಕಲತೆ ಲೆಕ್ಕಿಸದೆ ಗುರಿಯೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಏಕೈಕ ಗುರಿಯೊಂದಿಗೆ ಮುನ್ನಡೆದ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಭಾಗದ ಕಲ್ಕುಟ ಎಂಬ ಪುಟ್ಟ ಗ್ರಾಮದ ಭಿನ್ನಚೇತನ ಭೂಷಣ್ ಎಂಬಾತ ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಹೆಸರು ಮಾಡುತ್ತಿದ್ದಾರೆ.

ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ೧೦ನೇ ತರಗತಿ ತೇರ್ಗಡೆಯಾಗಿರುವ ಮೂಗ-ಕಿವುಡನಾಗಿರುವ ಭೂಷಣ್ ಶಾಲಾ ಜೀವನದಲ್ಲೇ ಕ್ರಿಕೆಟ್ ಮತ್ತಿತರ ಕ್ರೀಡೆಯಲ್ಲಿ ಮುಂದಿದ್ದ. ಸ್ಥಳಿಯವಾಗಿ ನಡೆಯುತ್ತಿದ್ದ ಟೂರ್ನಿಗಳಲ್ಲಿ ಈತ ತನ್ನ ಹಿರಿ ಸಹೋದರ ಆಕಾಶ್ ಜೊತೆಯಲ್ಲಿ ಆಡುತ್ತಿದ್ದ. ಕಳೆದ ೨ ವರ್ಷದಿಂದ ಕರಿಯಂಗಳ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ಬಳಿಕ ಮಂಗಳೂರಿನ ಮಹಲಸಾ ಕಾಲೇಜಿನಲ್ಲಿ ೩ ವರ್ಷ ಡ್ರಾಯಿಂಗ್ ಕೋರ್ಸ್ ಮಾಡುತ್ತಿದ್ದಾಗ ನಗರದ ದಕ್ಷಿಣ ಕನ್ನಡ ಕಿವುಡರ ಸ್ಪೋರ್ಟ್ ಅಸೋಸಿಯೇಶನ್ ಸಂಪರ್ಕ ಬೆಳೆಸಿಕೊಂಡು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ಆಡುತ್ತಿದ್ದರು. ಮುಂದೆ ಚಿಲಿಂಬಿಯಲ್ಲಿರುವ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಶನ್ ಮೂಲಕ ಕ್ರಿಕೆಟ್ ಆಡುತ್ತಿದ್ದಾಗ, ಈ ಹುಡುಗನಿಗೆ ವಾಲಿಬಾಲ್ ಆಡುವ ಅವಕಾಶ ಸಿಕ್ಕಿತು. ಇದು ಈತನ ಕ್ರೀಡಾ ಜೀವನದ ಟರ್ನಿಂಗ್ ಪಾಯಿಂಟ್.

ವಾಲಿಬಾಲ್‌ನಲ್ಲಿ ಹಲವು ಪ್ರಥಮ ಬಹುಮಾನಗಳೊಂದಿಗೆ ಉತ್ತಮ ಸಾಧನೆಗೈದ ಹಿನ್ನೆಲೆಯಲ್ಲಿ ಅಸೋಸಿಯೇಶನ್, ಈತನನ್ನು ಹೆಚ್ಚಿನ ತರಬೇತಿಗಾಗಿ ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಅಸೋಸಿಯೇಶನ್‌ಗೆ ಕಳುಹಿಸಿಕೊಟ್ಟಿತು. ಅಲ್ಲಿ ಸ್ಥಳೀಯ ಹಾಗೂ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಟೂರ್ನಿಗಳಲ್ಲಿ ಆಡಿದ ಹಳ್ಳಿ ಪ್ರತಿಭೆ ಭೂಷಣ್ ಅದೃಷ್ಟವಶಾತ್ ರಾಜ್ಯ ಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆಯಾದರು. ಆ ಹೊತ್ತಿಗೆ ತಮಿಳುನಾಡು, ಕೇರಳ ಮತ್ತಿತರ ರಾಜ್ಯ ತಂಡಗಳೆದು ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನದ ಜೊತೆಗೆ ವೈಯಕ್ತಿಕ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದ್ದರು.

ಮೊತ್ತಮೊದಲ ಬಾರಿಗೆ ೨೦೧೯ರ ಜನವರಿಯಲ್ಲಿ ಚೆನ್ನೈ ಯಲ್ಲಿ ನಡೆದಿದ್ದ ಅಂತರ್ ರಾಜ್ಯ ವಾಲಿಬಾಲ್‌ನಲ್ಲಿ ರಾಜ್ಯ ತಂಡ ರನ್ನರ್-ಅಪ್ ಸ್ಥಾನ ಪಡೆದಿತ್ತು. ೨೦೨೩ರ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕವು ಉತ್ತರ ಪ್ರದೇಶ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತ್ತು.
ತಂಡದ ಸದಸ್ಯನಾಗಿದ್ದ ಭೂಷಣ್ ಆ ದಿನವನ್ನು ಯಾವಾಗಲೂ ತನ್ನದೇ ಆದ ಭಾಷೆಯಲ್ಲಿ ಬಣ್ಣಿಸುತ್ತಿರುತ್ತಾನೆ ಎಂದು ಸಹೋದರನ ಸಾಧನೆ ಬಗ್ಗೆ ಆಕಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಕ್ರೀಡಾ ತರಬೇತುದಾರರು, ಮನೆಯವರು ಮತ್ತು ಗೆಳೆಯರ ಸಹಕಾರದಿಂದ ಭೂಷಣ್‌ಗೆ ಕೇಂದ್ರ ಸರ್ಕಾರದ ಸ್ಕಾಲರ್‌ಶಿಪ್ ಬಂದಿತ್ತು.
ವಿಶೇಷ ಚೇತನರ ಕ್ರೀಡಾ ಕ್ಷೇತ್ರದಲ್ಲಿ ಯಶಸ್ವಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಕರಿಯಂಗಳದ ಭೂಷಣ್ ಇದೀಗ ದೇಶಕ್ಕೆ ಭೂಷಣಪ್ರಾಯ ಕ್ರೀಡಾಳು ಆಗುವ ಕ್ಷಣ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಿವುಡರ ಕ್ರೀಡೆಗಳ ಉನ್ನತ ಮಂಡಳಿಯಾಗಿರುವ ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ದಿ ಡೆಫ್‌ನಿಂದ ಎಪ್ರಿಲ್ ತಿಂಗಳಲ್ಲಿ ಈತನಿಗೆ ರಾಷ್ಟç ತಂಡದ ವಾಲಿಬಾಲ್ ಕೋಚಿಂಗ್ ಶಿಬಿರಕ್ಕೆ ಬುಲಾವ್ ನೀಡಿತ್ತು. ಗ್ವಾಲಿಯರ್‌ನಲ್ಲಿ ನಡೆದಿದ್ದ ೧೦ ದಿನಗಳ ಅರ್ಹತಾ ಸುತ್ತಿನ ಶಿಬಿರದಲ್ಲಿ ಭೂಷಣ್ ಹಾಗೂ ಕರ್ನಾಟಕದಿಂದ ಮೊಹಮ್ಮದ್ ಶರೀಖ್ ಸಹಿತ ೧೨ ಪ್ರಮುಖ ಹಾಗೂ ಇಬ್ಬರು ಸ್ಟ್ಯಾಂಡ್-ಬೈ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಈ ತಂಡವು ಗ್ವಾಲಿಯರ್‌ನಲ್ಲಿ ಜೂನ್ ೨-೧೮ರವರೆಗೆ ನಡೆಯಲಿರುವ ಮತ್ತೊಂದು ಸುತ್ತಿನ ವಾರ್ಮ್-ಅಪ್ ಶಿಬಿರದ ಬಳಿಕ ಜಪಾನ್‌ಗೆ ತೆರಳಲಿದೆ. ಜಪಾನ್‌ನ ಒಕಿನಾವಾದಲ್ಲಿ ಜೂನ್ ೨೧-೩೦ರವರೆಗೆ ೫ನೇ ವಿಶ್ವ ಕಿವುಡರ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ನಡೆಯಲಿದ್ದು, ಭೂಷಣ್ ಹಾಗೂ ಸುರತ್ಕಲ್‌ನ ಮೊಹಮ್ಮದ್ ಶರೀಖ್ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ತಂಡದಲ್ಲಿ ಭೂಷಣ್ ಯೂನಿವರ್ಸಲ್ ಆಟಗಾರನಾಗಿದ್ದರೆ, ಮೊಹಮ್ಮದ್ ಶರೀಖ್ ಮಿಲ್ಡ್ ಬ್ಲಾಕರ್ ಆಗಿರುತ್ತಾರೆ. ಈಗಾಗಲೇ ಗ್ವಾಲಿಯರ್ ತಲುಪಿರುವ ಭೂಷಣ್ ಜೂನ್ ೨೦ರಂದು ಜಪಾನ್‌ಗೆ ಪ್ರಯಾಣ ಬೆಳೆಸಲಿದ್ದು, ಮಗನು ಮತ್ತೊಂದು ಪ್ರಥಮದೊಂದಿಗೆ ತಾಯ್ನಾಡಿಗೆ ಕೀರ್ತಿ ಬರುವ ನಿರೀಕ್ಷೆಯಲ್ಲಿದ್ದಾರೆ. ತಂದೆ-ನಾಗೇಶ್ ಮತ್ತು ತಾಯಿ ನಳಿನಿ ಹಾಗೂ ಊರಿನ ನಾಗರಿಕರು.
ಬರಹ: ಧನಂಜಯ ಗುರುಪುರ