ಶ್ರೀ ಕ್ಷೇ. ಧ. ಗ್ರಾ. ಯೋ. ಬಂಟ್ವಾಳ ವಲಯದ ವತಿಯಿಂದ ವಿವಿಧ ಯೋಜನೆಯಡಿ ಆರ್ಥಿಕ ನೆರವಿನ ಚೆಕ್, ಸಲಕರಣೆ ವಿತರಣೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ವಲಯದ ವತಿಯಿಂದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಆರ್ಥಿಕ ನೆರವಿನ ಚೆಕ್ ಹಾಗೂ ಸಲಕರಣೆ ವಿತರಣಾ ಕಾರ್ಯಕ್ರಮ ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉನ್ನತಿ ಸೌಧದಲ್ಲಿ ನಡೆಯಿತು.

ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಡವರನ್ನು ಗುರುತಿಸಿ ಅವರನ್ನು ಮೇಲೆಕ್ಕೆತ್ತುವ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಯೋಜನೆಯಲ್ಲಿ ತೊಡಗಿಸಿಕೊಂಡವರು ಭಾಗ್ಯವಂತರು ಎಂದ ಅವರು ಯೋಜನೆಯಿಂದ ಪ್ರತಿಯೊಬ್ಬರಿಗೂ ಲಾಭವಾಗಿದೆ ಎಂದು ತಿಳಿಸಿದರು.
ಬಂಟ್ವಾಳ ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಮಹಿಳೆಯರು, ಗ್ರಾಮೀಣ ಜನರು ಸ್ವಾವಲಂಬಿಯಾಗಿ ಬದುಕಲು ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಯೋಜನೆಗಳು ಕಾರವಾಗಿದ್ದು ಎಲ್ಲರ ಸಹಕಾರವಿದ್ದಾಗ ಗ್ರಾಮಾಭಿವೃದ್ದಿ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ ಒಂದು ತಾಲೂಕಿನಲ್ಲಿ ಆರಂಭವಾದ ಕಾರ್ಯಕ್ರಮ ಪ್ರಸ್ತುತ ಎರಡು ರಾಜ್ಯಗಳಿಗೆ ವಿಸ್ತರಣೆಗೊಂಡು ಜನಮನ್ನಣೆ ಪಡೆದುಕೊಂಡಿದೆ ಬಡ ಜನರ ಬದುಕಿಗೆ ಆಧಾರ ಸ್ತಂಭವಾಗಿ ಗ್ರಾಮಾಭಿವೃದ್ಧಿಯ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೇಂದ್ರ ಸಮಿತಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸದಾನಂದ ನಾವೂರು, ಕೆಳಗಿನ ಪೇಟೆ ಜುಮ್ಮಾ ಮಸೀದಿಯ ಧರ್ಮಗುರು ಉಮ್ಮರ್ ದಾರಿಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಯೋಜಾನಾಧಿಕಾರಿ ಬಾಲಕೃಷ್ಣ ಸ್ವಾಗತಿಸಿದರು. ದ.ಕ. ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಹೇಮಾಲತ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ 49 ಮಂದಿಗೆ ಸುರಕ್ಷಾ ಯೋಜನೆಯಡಿ ರೂ. 6,84,600 ಆರ್ಥಿಕ ನೆರವು, 5 ಮಂದಿಗೆ ಪ್ರಗತಿ ರಕ್ಷಾ ಕವಚ ಯೋಜನೆಯಡಿ1,27, 609 ರೂ. ಆರ್ಥಿಕ ನೆರವು, ಸಾಂಕೇತಿಕವಾಗಿ ಸುರಕ್ಷ ಕಾರ್ಡ್ ವಿತರಣೆ ಹಾಗೂ ವೀಲ್ ಚೆಯರ್ ವಿತರಿಸಲಾಯಿತು.