ಬಿಜೆಪಿ ಗೆಲುವಿಗೆ ಕಾರ್ಯಕರ್ತರ ಶಕ್ತಿ, ಪಕ್ಷದ ವಿಚಾರಗಳೇ ಆಧಾರ :ಕ್ಯಾ.ಬ್ರಿಜೇಶ್ ಚೌಟ
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮ ಹಾಗೂ ಆಡಳಿತದ ವೈಖರಿಯನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳೇ ಪ್ರಶಂಸೆ ವ್ಯಕ್ತಪಡಿಸಿದ್ದು, ಭಾರತದ ಸರ್ವ ಸಾಮಾನ್ಯನಿಗೂ ಜನಪರವಾದ ಯೋಜನೆಗಳ ಪ್ರಯೋಜನ ಲಭಿಸಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳವಾರ ಬಂಟ್ವಾಳ ಕ್ಷೇತ್ರದ ಕಾವಳಪಡೂರು ಮಹಾಶಕ್ತಿಕೇಂದ್ರಕ್ಕೆ ಸಂಬಂಧಿಸಿ ಶಿವಾನಂದ ಪೂಜಾರಿ ಮಾವಿನಕಟ್ಟೆ ಅವರ ಮನೆಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ದೈವ ದೇವರ ಪಾವಿತ್ರ್ಯತೆ ಯನ್ನು ರಕ್ಷಿಸುವುದರೊಂದಿಗೆ ಹಿರಿಯರ ನಂಬಿಕೆಗೆ ಗೌರವ ತರುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತೇನೆ.
ಸಂಘಟನೆ, ಹಿಂದುತ್ವದ ಅದಾರದಲ್ಲಿ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷವನ್ನು ಇನ್ನಷ್ಟು ಶಕ್ತಿಯುತವಾಗಿ ಸಂಘಟಿಸಲು ಪ್ರಯತ್ನಿಸುತ್ತೆನೆ, ಪಕ್ಷದ ಗೆಲುವಿಗೆ ಶಕ್ತಿ ತುಂಬುವ ಕಾರ್ಯಕರ್ತರ ಪರಿಶ್ರಮಕ್ಕೆ ತಲೆಬಾಗಿ ಪಕ್ಷದ ಸಿದ್ಧಾಂತ ಮತ್ತು ವಿಚಾರ ಧಾರೆಗಳನ್ನು ಎತ್ತಿ ಹಿಡಿಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ತನ್ನನ್ನು ಅತ್ಯಧಿಕ ಮತಗಳಿಂದ ಚುನಾಯಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದ ಅಭ್ಯರ್ಥಿ ಬ್ರಿಜೇಶ್ ಚೌಟ ಸೈನ್ಯದಲ್ಲಿ ಸೇವೆ ಸಲ್ಲಿಸಿ ಊರಿಗೆ ವಾಪಾಸಾದ ಬಳಿಕ ಪಕ್ಷ ಅನೇಕ ಜವಾಬ್ದಾರಿಗಳನ್ನು ನೀಡಿ ನನ್ನನ್ನು ಬೆಳೆಸಿದೆ. ಇಂತಹ ಅವಕಾಶ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗಲು ಸಾಧ್ಯ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಕೂಡಲೇ ಬಿಜೆಪಿಯ ಗೆಲುವು ನಿಶ್ಚಿತವಾಗಿದೆ, ಆದರೆ ಕಾರ್ಯಕರ್ತರು ಒಂದಾಗಿ ಗೆಲುವಿನ ಅಂತರವನ್ನು ಹೆಚ್ಚಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ದೇವಪ್ಪ ಪೂಜಾರಿ, ಸುಲೋಚನ ಜಿ.ಕೆ.ಭಟ್, ಪೂಜಾ ಪೈ, ಜಗದೀಶ್ ಶೇಣವ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ವಿಕಾಸ್ ಪುತ್ತೂರು, ದೇವದಾಸ್ ಶೆಟ್ಟಿ, ಪ್ರಭಾಕರ ಪ್ರಭು, ರಾಮ್ ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಶೇಖರ್ ಶೆಟ್ಟಿ, ಸಂತೋಷ್ ಕುಮಾರ್ ರಾಯಿ ಬೆಟ್ಟು, ರಾಜೀವಿ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮನಾಥ ರಾಯಿ ಮತ್ತಿತರರು ಉಪಸ್ಥಿತರಿದ್ದರು.
ಪುರುಷೋತ್ತಮ ಶೆಟ್ಟಿ ವಾಮದಪದವು ಸ್ವಾಗತಿಸಿದರು.
ಇದಕ್ಕು ಮೊದಲು ಅಭ್ಯರ್ಥಿ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಹಾಗೂ ಪ್ರಮುಖರು ಸಿದ್ದಕಟ್ಟೆ ಸಮೀಪದ ಸಂಗಬೆಟ್ಟು ವೀರಭದ್ರ, ಮಹಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಬಂಟ್ವಾಳ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು.