ಬಾರ್ದಿಲ ಶ್ರೀ ಸಾಂಬ ಸದಾಶಿವ ದೇವಸ್ಥಾನ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮ
ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವಸ್ಥಾನದಲ್ಲಿ ಏಪ್ರಿಲ್ 25 ರ ಗುರುವಾರ ಮೊದಲ್ಗೊಂಡು 28 ರ ಭಾನುವಾರದವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ರಾಜನ್ ದೈವ ಕೊಡಮಣಿತ್ತಾಯ ಪ್ರತಿಷ್ಠೆಯ ಆಮಂತ್ರಣ ಪತ್ರ ಬಿಡುಗಡೆ ಮತ್ತು ಚಪ್ಪರ ಮುಹೂರ್ತ ಕಾರ್ಯಕ್ರಮವು, ಬ್ರಹ್ಮಶ್ರೀ ದೇರೆಬೈಲು ಡಾ|ಶಿವಪ್ರಸಾದ್ ತಂತ್ರಿಗಳ ನಿರ್ದೇಶನದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತರ ನೇತೃತ್ವದಲ್ಲಿ ಸೋಮವಾರ ಶ್ರೀಕ್ಷೇತ್ರದಲ್ಲಿ ನಡೆಯಿತು.
ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ವೈದಿಕ ವಿಧಿ-ವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಸಂಪೂರ್ಣ ಜೀರ್ಣೋದ್ದಾರಗೊಂಡಿರುವ ದೇವಸ್ಥಾನದಲ್ಲಿ ಏಪ್ರಿಲ್ 25 ರ ಗುರುವಾರ ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ 4 ಗಂಟೆಯಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, 26ರ ಶುಕ್ರವಾರ ಬೆಳಿಗ್ಗೆ 10:40ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಸಾಂಬ ಸದಾಶಿವ ದೇವರ ಲಿಂಗ ಪ್ರತಿಷ್ಠೆ, ಗಣಪತಿ ಬಿಂಬ ಪ್ರತಿಷ್ಠೆ, ಕೊಡಮಣಿತ್ತಾಯ ದೈವದ ಪ್ರತಿಷ್ಠೆ, 28ರ ಭಾನುವಾರ ಬೆಳಿಗ್ಗೆ 10:20ರ ಮಿಥುನ ಲಗ್ನದಲ್ಲಿ ಸಾಂಬಸದಾಶಿವ ದೇವರು ಮತ್ತು ಮಹಾಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಮತ್ತು ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೋಮಶೇಖರ ಶೆಟ್ಟಿ ಎಂ. ಮತ್ತು ಸಮಿತಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಕಾರ್ಯಾಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮತ್ತು ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು ಮತ್ತು ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು.
ಇರುವೈಲು, ಕುಪ್ಪೆಪದವು ಮತ್ತು ಕುಳವೂರು ಗ್ರಾಮಗಳ ದೇವಸ್ಥಾನಗಳ ಮುಖ್ಯಸ್ಥರು, ದೈವಸ್ಥಾನಗಳ ಮುಖ್ಯಸ್ಥರು, ವಿವಿಧ ಉಪಸಮಿತಿಗಳ ಸಂಚಾಲಕರು, ಸದಸ್ಯರು, ಕಿಲೆಂಜಾರು, ಇರುವೈಲು, ಕುಳವೂರು ಮತ್ತು ಮುತ್ತೂರು ಗ್ರಾಮಗಳ, ಧಾರ್ಮಿಕ ಮುಖಂಡರು, ಗಣ್ಯರು,ಸಂಘ-ಸಂಸ್ಥೆಗಳ ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು.