Published On: Tue, Mar 5th, 2024

ಕಾಂಗ್ರೆಸ್‌ ಸರಕಾರದ ಹಿಂದೂ ವಿರೋಧಿ‌ ನೀತಿಯನ್ನು ಖಂಡಿಸಿ ವಿ.ಹಿಂ.ಪ ಭಜರಂಗದಳ ಕಾರ್ಯಕರ್ತರಿಂದ ಹೆದ್ದಾರಿ ತಡೆದು‌ ಪ್ರತಿಭಟನೆ

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ‌ ನೇತೃತ್ವದ ಕಾಂಗ್ರೆಸ್‌ ಸರಕಾರದ ಹಿಂದೂ ವಿರೋಧಿ‌ ನೀತಿಯನ್ನು ಖಂಡಿಸಿ ಪುತ್ತೂರು ಜಿಲ್ಲಾ ಘಟಕದ ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಬಿ.ಸಿ.ರೋಡಿನಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದು ಈ ಸಂದರ್ಭ ಪ್ರತಿಭಟನಾ ನಿರತ ಹಿಂದೂ ಕಾರ್ಯಕರ್ತರನ್ನು ಬಂಟ್ವಾಳ ಪೋಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ.

ಬಿಜೆಪಿ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದು ಗಲಭೆಗೆ ಕಾರಣವಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ ಅಪಮಾನ ಮಾಡಿರುವ ಕಾಂಗ್ರೆಸ್ ಬಳಿಕ ಶಾಲಾ ಪಠ್ಯ ಪುಸ್ತಕಗಳಲ್ಲಿದ್ದ ರಾಷ್ಟ್ರೀಯತೆಯ ವಿಚಾರಗಳನ್ನು ಕಿತ್ತುಹಾಕಿದೆ ಎಂದು ಆರೋಪಿಸಿದರು.

ಇದರ ಮುಂದುವರಿದ ಭಾಗವಾಗಿ ಮಂಗಳೂರಿನ ಶಾಲೆಯೊಂದರಲ್ಲಿ ಶ್ರೀ ರಾಮನನ್ನು ಅವಹೇಳನಕಾರಿಯಾಗಿ ಮಾತನಾಡಿದ ಶಿಕ್ಷಕಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ‌ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡಿದೆ ಎಂದು ಟೀಕಿಸಿದರು.

ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಯನ್ನು ಕಾಂಗ್ರೆಸ್ ನಾಯಕರೋರ್ವರು ಆತ ನಮ್ಮ ಬ್ರದರ್ಸ್ ಎಂದು ಹೇಳಿಕೆ ನೀಡಿದ ಪರಿಣಾಮವಾಗಿ ಬೆಂಗಳೂರು ‌ನಗರದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದರು, ವಿಧಾನ ಸೌಧದೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದರೂ‌ ಸಿಎಂಯಾದಿಯಾಗಿ ಸಚಿವ ಸಂಪುಟದ ಸದಸ್ಯರು ಆರೋಪಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದ್ದು, ಕಾಂಗ್ರೆಸ್  ಸರಕಾರದ ಧೋರಣೆ ರಾಜ್ಯದ ಜನರು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಪ್ರಸನ್ನ ಅವರು ಮಾತನಾಡಿ, ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ‌ ನೀತಿಯಿಂದಾಗಿ  ದೇಶ ದ್ರೋಹಿಗಳ ಹೆಡೆಮುರಿ ಕಟ್ಟಬೇಕಾದ ಪೊಲೀಸ್ ಇಲಾಖೆ ದೇಶಭಕ್ತ ಹಿಂದೂ‌ ಕಾರ್ಯಕರ್ತರ ಮನೆಗೆ ಮಧ್ಯ ರಾತ್ರಿ ನುಗ್ಗಿ ದೌರ್ಜನ್ಯವೆಸಗುತ್ತಾರಲ್ಲದೆ, ಹಿಂದೂ ಕಾರ್ಯಕರ್ತರ ಮೇಲೆಯೇ ಗೂಂಡ ಕಾಯ್ದೆಯನ್ನು ಹಾಕಲಾಗುತ್ತದೆ. ಇಂತಹ ಬೆದರಿಕೆಗೆ ಹಿಂದೂ‌ ಸಮಾಜ ಬಗ್ಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು ಮಾತನಾಡಿ ಹಿಂದೂ ವಿರೋಧಿ ನೀತಿ‌ ಅನುಸರಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಾ, ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಶಿವ ಪ್ರಸಾದ ತುಂಬೆ, ಬಿಜೆಪಿ ಪ್ರಮುಖರಾದ ಎ.ಗೋವಿಂದ ಪ್ರಭು, ಕಿಶೋರ್ ಕುಮಾರ್ ಬೊಟ್ಯಾಡಿ, ದೇವದಾಸ್ ಶೆಟ್ಟಿ, ರಾಮ್ ದಾಸ ಬಂಟ್ವಾಳ, ಚೆನ್ನಪ್ಪ ಆರ್ ಕೋಟ್ಯಾನ್, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ಸಚಿನ್ ಮೆಲ್ಕಾರ್ ಮೊದಲಾದವರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter