ನಮೂನೆ-9 ಮತ್ತು 11(ಎ) ವಿನ್ಯಾಸ ಅನುಮೋದನೆಗೆ ಗ್ರಾಮ ಪಂಚಾಯತ್ ನಲ್ಲೇ ಮುಂದುವರಿಸಲು ಸಚಿವರಿಗೆ ಮನವಿ
ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಭೂ ಪರಿವರ್ತನೆ ನಿವೇಶನ ಮತ್ತು ಕಟ್ಟಡಗಳು ವಾಸ್ತವ್ಯದ ಮನೆಗಳಿಗೆ ನಮೂನೆ-9 ಮತ್ತು ನಮೂನೆ-11(ಎ) ನೀಡುತ್ತಿರುವ ಸಂದರ್ಭದಲ್ಲಿ ವಿನ್ಯಾಸ ಅನುಮೋದನೆಗೆ ಸಂಬಂಧಿಸಿ ಗ್ರಾಮ ಪಂಚಾಯತ್ ಗಳಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಸಿದ್ದಕಟ್ಟೆ ಸಹಕಾರಿ ವ್ಯವಸಾಹಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ರಾಜ್ಯದ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಮೂನೆ-9 ಮತ್ತು ನಮೂನೆ-11(ಎ) ನೀಡುತ್ತಿರುವ ಸಂದರ್ಭದಲ್ಲಿ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ಅಯಾಯ ಗ್ರಾಮ ಪಂಚಾಯತ್ ಗಳಲ್ಲಿ ಅದೆಷ್ಟೋ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ತುಂಬಾ ಅನುಕೂಲವಾಗುತ್ತಿತ್ತು. ಕರಾವಳಿ ಜಿಲ್ಲೆಗಳಲ್ಲಿ ಜನರು ಎಲ್ಲೆಂದರಲ್ಲಿ ಅಥವಾ ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯವಿದ್ದು, ಜೀವನ ನಡೆಸುತ್ತಿರುವುದಾಗಿದೆ. ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಇದರಿಂದ ಬಾಧಿತರು ರಾಜ್ಯ ಹೈಕೋಟ್೯ನಲ್ಲಿ ರಿಟ್ ಅರ್ಜಿ ಸಲ್ಲಿಸಿ ವಿವರಣೆ ಕೇಳಿರುತ್ತಾರೆ ಎಂದು ಪ್ರಭು ಮನವಿಯಲ್ಲಿ ವಿವರಿಸಿದ್ದಾರೆ.
ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಲಯವು ಅನಾವಶ್ಯಕ ವಿವಾದ ಇನ್ನಿತರ ಸಮಸ್ಯೆಗಳನ್ನು ನಿಯಂತ್ರಿಸಲು ಸರಕಾರದ ವಿವರಣೆ ಕೇಳಿರುತ್ತದೆ.ಈ ಸಂಬಂಧ ನಡೆದ ಸಮಲೋಚನಾ ಸಭೆಯಲ್ಲಿ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಈ ಸಮಸ್ಯೆಗೆ ಸಮರ್ಪಕವಾದ ಮಾಹಿತಿ ಹಾಗೂ ಪರಿಹಾರವನ್ನು ನೀಡದಿರುವುದರಿಂದ ಗ್ರಾಮ ಪಂಚಾಯತ್ ಗಳಲ್ಲಿ ವಿನ್ಯಾಸ ಅನುಮೋದನೆ ಮಾಡುವುದನ್ನು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ತಡೆ ಹಿಡಿದು ಆದೇಶಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪರಿಣಾಮವಾಗಿ ಗ್ರಾಮ ಪಂಚಾಯತ್ ಗಳಲ್ಲಿ ನಮೂನೆ-9 ಮತ್ತು ನಮೂನೆ-11(ಎ)ಗಳಿಗೆ ಅರ್ಜಿ ಸಲ್ಲಿಸಿದ ಸಾವಿರಾರು ಮಂದಿಗಳಿಗೆ ತೊಂದರೆಯಾಗುತ್ತಿದ್ದು ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರಗಳಿಗೆ ಅಲೆದಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದಿನ ನಿಯಾಮವಳಿ ಪ್ರಕಾರ ನಮೂನೆ-9 ಮತ್ತು ನಮೂನೆ-11(ಎ) ನೀಡುವ ಬಗ್ಗೆ ವಿನ್ಯಾಸ ಅನುಮೋದನೆಗೆ ಆಯಾ ಗ್ರಾಮ ಪಂಚಾಯತ್ ಗಳಲ್ಲಿ ಮಂಜೂರು ಮಾಡುವಂತಾಗಲೂ ಅಗತ್ಯ ಕ್ರಮಗಳನ್ನು ಅನುಸರಿಸಿ ಸೂಕ್ತ ಪರಿಷ್ಕ್ರತ ಆದೇಶ ಹೊರಡಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.