ಡಾ.ಹೆಗ್ಗಡೆ ಅವರ ಕನಸು ನನಸುಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯ:ಕತ್ತಲ್ ಸಾರ್
ಬಂಟ್ವಾಳ: ತುಳುನಾಡಿನಲ್ಲಿ ವಿಭಿನ್ನ ಧಾರ್ಮಿಕ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ದುಶ್ಚಟದಿಂದ ದೂರ ಉಳಿದು ಸಂಸ್ಕಾರಯುಕ್ತ ಮತ್ತು ಸಮೃದ್ಧ ಸಮಾಜ ನಿರ್ಮಿಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕನಸು ನನಸುಗೊಳಿಸಲು ಎಲ್ಲರ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಗ್ಗ ವಲಯ ವತಿಯಿಂದ ವಾಮದಪದವು ಗಣೇಶ ಮಂದಿರದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಪೂಜಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಸಂಸ್ಕಾರಯುಕ್ತ ಮತ್ತು ಸ್ವಾಭಿಮಾನಿ ಜೀವನ ನಡೆಸಲು ಯೋಜನೆ ಪ್ರೇರಣೆ ನೀಡುತ್ತಿದೆ ಎಂದರು.
ಸ್ಥಳೀಯ ಗ್ರಾಮ ಪಂಚಾಯಿತ್ ಅಧ್ಯಕ್ಷೆ ವನಿತಾ, ಯೋಜನಾಧಿಕಾರಿ ಮಾಧವ ಗೌಡ, ವಗ್ಗ ವಲಯಾಧ್ಯಕ್ಷ ಉಮೇಶ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮತ್ತಿತರರು ಶುಭ ಹಾರೈಸಿದರು.
ಪ್ರಮುಖರಾದ ನವೀನ್ ಚಂದ್ರ ಶೆಟ್ಟಿ, ಆನಂದ ಆಚಾರ್ಯ, ಪ್ರವೀಣ್ ಅಂತರ, ಶಾಮರಾಯ ಆಚಾರ್ಯ, ಕುಶಲ, ಗೋಪಾಲಕೃಷ್ಣ ಚೌಟ, ವಿಜಯ ರೈ ಆಲದಪದವು ಮತ್ತಿತರರಿದ್ದರು.
ಮೇಲ್ವಿಚಾರಕಿ ಸವಿತಾ ಪ್ರಾಸ್ತಾವಿಕ ಮಾತನಾಡಿದರು. ಧ್ರುವಿ ಪಿ. ಕುಂದರ್ ಪ್ರಾರ್ಥಿಸಿದರು. ಸಮಿತಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಮಾಧವ ವಂದಿಸಿದರು. ಗಣೇಶ್ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ವಗ್ಗ ಶ್ರೀ ಶಾರದಾಂಬ ಮಹಿಳಾ ಭಜನಾ ಮಂಡಳಿ, ಮಾವಿನಕಟ್ಟೆ ಚಾಮುಂಡೇಶ್ವರಿ ಭಜನಾ ಮಂಡಳಿ ಮತ್ತು ಅಂದ್ರಳಿಕೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೆ ಪ್ರದರ್ಶನಗೊಂಡಿತು.