ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ದೈವಗಳ ಆರಾಧನಾ ಪರಿಕರಗಳು ಕಳವು
ಕೈಕಂಬ: ಗುರುಪುರ ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ಭಾನುವಾರ ರಾತ್ರಿ ದೈವಗಳ ಆರಾಧನಾ ಪರಿಕರಗಳು ಕಳುವಾಗಿದ್ದು, ಬಜ್ಪೆ ಪೊಲೀಸರು ಸೋಮವಾರ ಗುತ್ತಿನ ಮನೆ ಹಾಗೂ ಇತರ ೨ ಕಡೆ ಮಹಜರು ನಡೆಸಿದರು.
ದೋಣಿಂಜೆಗುತ್ತಿನ ಗಡಿಕಾರ ಪ್ರಮೋದ್ ಕುಮಾರ್ ರೈ ಅವರು ಜ. ೨೯ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗುತ್ತಿನ ಚಾವಡಿ ಮನೆ ಹಾಗೂ ಹತ್ತಿರದಲ್ಲಿರುವ ಎರಡು ಕಲ್ಲುರ್ಟಿ ದೈವದ ಸಾನದಿಂದ ೨ ಬೆಳ್ಳಿಯ ಹೂಜಿ, ೩ ಗಂಟೆ, ದೀಪ ಇಡುವ ಸಾನಾದಿಕೆ(ದೀಪದ ಪರಿಕರ), ೨ ಮಣಿ, ೧ ಹಿತ್ತಾಳೆ ಕೊಡಪಾನ, ೧ ಕರ್ಸಳೆ(ಖಡ್ಗ), ೧ ಹಿತ್ತಾಳೆ ಚೆಂಬು, ಆರತಿ ಪರಿಕರ ಕಳ್ಳತನವಾಗಿದೆ.
ಜನವಸತಿ ಕಡಿಮೆ ಇರುವ ಇಲ್ಲಿ ಕಳುವಾಗಿದ್ದು, ಜ.೨೮ರಂದು ಬೆಳಿಗ್ಗೆ ಚಾವಡಿ ಮನೆಯಲ್ಲಿ ದೀಪ ಇಡಲು ಹೋದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಜ. ೨೯ರಂದು ಬಜ್ಪೆ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ಕಳುವಾದ ಸೊತ್ತುಗಳ ಬಗ್ಗೆ ಪ್ರಮೋದ್ ಕುಮಾರ್ ರೈ ಮತ್ತು ಗುತ್ತಿನ ಮನೆಯವರಿಂದ ಮಾಹಿತಿ ಪಡೆದುಕೊಂಡರು.