ಜ.22 ರಂದು ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವಂತೆ ಮನವಿ
ಬಂಟ್ವಾಳ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಜ.22 ರಂದು ಸೋಮವಾರ ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಬಂಟ್ವಾಳ ತಾಲೂಕಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಕ್ಷತೆ ವಿತರಣಾ ಸಮಿತಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸಂಚಾಲಕ ಪ್ರಸಾದ್ ಕುಮಾರ್ ರೈ ಅವರು ಮನವಿ ಮಾಡಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಕಾರ್ಯಕರ್ತರು ಪ್ರತಿ ಅಂಗಡಿಗಳಿಗೆ ತೆರಳಿ ಮನವೊಲಿಸುವ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಪ್ರತಿ ಗ್ರಾಮದಲ್ಲಿರುವ ದೇವಸ್ಥಾನಗಳಲ್ಲಿ ಗ್ರಾಮಸ್ಥರು ಸೇರಿದಂತೆ ಎಲ್ಲಾ ರಾಮ ಭಕ್ತರು ವಿವಿಧ ಸಂಘಟನೆ , ಸಮಾಜದ ಪ್ರಮುಖರು, ಸಾಧುಸಂತರು ಸೇರಿಕೊಂಡು ರಾಮನಾಮ ಜಪ ಹಾಗೂ ಹನುಮಾನ್ ಚಾಲೀಸ ಪಠಣಗಳನ್ನು ಮಾಡಲಾಗುತ್ತದೆಯಲ್ಲದೆ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆಯ ನೇರ ಪ್ರಸಾರ ವನ್ನು ಎಲ್.ಇ.ಡಿ.ಪರದೆ ಮೂಲಕ ವೀಕ್ಷಿಸಲು ಸಿದ್ದತೆ ನಡೆಸಿದೆ.
ಮಧ್ಯಾಹ್ನ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದು ಅವರು ವಿವರಿಸಿದರು.
ಸಂಜೆ ಸೂರ್ಯಾಸ್ತದ ವೇಳೆ ಪ್ರತಿ ಮನೆಯಲ್ಲಿ ಐದು ದೀಪಗಳನ್ನು ಉರಿಸಿ, ಉತ್ತರಾಭಿಮುಖವಾಗಿ ಆರತಿ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಪ್ರಮುಖ 35 ಕಡೆ ಏಕಕಾಲದಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸಮಾಜದಲ್ಲಿರುವ ವಿವಿಧ ಸಂಘ ಸಂಸ್ಥೆಗಳು ಮತ, ಪಂಥಗಳನ್ನು ಕಳಚಿ ಈ ಪುಣ್ಯ ಕಾರ್ಯದಲ್ಲಿ ಸೇರಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕರೆಯನ್ವಯ ಎಲ್ಲಾ ದೇವಸ್ಥಾನಗಳ ಸ್ವಚ್ಚತಾ ಕಾರ್ಯಗಳನ್ನು ಬಿಜೆಪಿ ವತಿಯಿಂದ ಮಾಡಲಾಗಿದೆ ಎಂದು ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಈ ಸಂದರ್ಭ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಅಮ್ಟಾಡಿ, ಪ್ರತೀಕ್ ಬಂಟ್ವಾಳ ಉಪಸ್ಥಿತರಿದ್ದರು