ಕಬಡ್ಡಿ ಪಂದ್ಯಾಟ 2024, ಸಾಧಕರಿಗೆ ಸನ್ಮಾನ, ʼಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕ್ರೀಡೆ ಎಂದರೆ ಅದು ಕಬಡ್ಡಿʼ; ಸತ್ಯಜಿತ್ ಸುರತ್ಕಲ್
ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಅಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಶಶಿಕಿರಣ್ ಪೂಜಾರಿ ಬೆಳ್ಳೂರು ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಮುಕ್ತ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ಜ.13ರಂದು ಶನಿವಾರ ನಡೆಯಿತು.
ಮಾದುಕೋಡಿ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ವಿಜಯ್ ಗುರೂಜಿಯವರ ಉಪಸ್ಥಿತಿಯಲ್ಲಿ ಆಗಮಿಸಿದ ಅಥಿತಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಲಾಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ಯಕ್ಷಗಾನ ಕಲಾವಿದ ಪುಷ್ಪರಾಜ್ ಶೆಟ್ಟಿ, ಬಸ್ಸು ಚಾಲಕ ಮೋಹನ್ ಶೆಟ್ಟಿ ಮುಂಡಡ್ಕ, ಹಿಂದೂ ರುದ್ರ ಭೂಮಿಯಲ್ಲಿ ಕೆಲಸ ನಿರ್ವಹಿಸಿತ್ತಿರುವ ಗೋಪಾಲ್ ಬಡಕಬೈಲ್, ನಾಟಿ ವೈದ್ಯ ಜನಾರ್ಧನ್ ಹೆಚ್.ಎಸ್., ಭೃಷ್ಟಾಚಾರ ರಹಿತವಾಗಿ ಸರಕಾರಿ ಕೆಲಸ ನಿರ್ವಹಿಸಿದ ಸುಧಾಕರ ಕೊಟ್ಟಾರಿ ಹಾಗೂ ಸಮಾಜ ಸೇವಕ, ಯುವ ಉದ್ಯಮಿ ಜನಾರ್ಧನ್ ಪೂಜಾರಿ ಇವರಿಗೆ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ನಾರಾಯಣ ಗುರು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ 7 ಜನ ಎದುರಾಳಿಗಳನ್ನು ಎದುರಿಸಿ ತನ್ನ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಿ, ಬುದ್ಧಿ ಉಪಯೋಗಿಸಿ ಗೆದ್ದು ಬರುತ್ತೇನೆ ಎಂಬ ಆತ್ಮವಿಶ್ವಾಸವನ್ನು ಕೊಡುವ, ಉತ್ಸಾಹ ಹೆಚ್ಚಿಸುವಂತ ಕ್ರೀಡೆ ಎಂದರೆ ಅದು ಕಬಡ್ಡಿ ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿ ಮಾತನಾಡಿ ಮೊದಲು ಕಬಡ್ಡಿಯನ್ನು ಗ್ರಾಮೀಣ ಕ್ರೀಡೆ ಎಂದು ತಿಳಿದಿದ್ದರು ಆದರೆ ಈಗ ಕಬಡ್ಡಿ ಎನ್ನುವುದು ಗ್ರಾಮೀಣ ಭಾಗಕ್ಕೆ ಸೀಮಿತವಾದ ಗ್ರಾಮೀಣ ಕ್ರೀಡೆಯಾಗಿ ಉಳಿಯದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹಾಗೂ ಮಾನ್ಯತೆಯನ್ನು ಪಡೆದಿದೆ. ಸಮಯ ಸಿಕ್ಕಾಗ ಮನೆಯಲ್ಲಿ ಕುಳಿತು ಕಬಡ್ಡಿ ಪಂದ್ಯಾಟ ಟಿ.ವಿಯಲ್ಲಿ ವೀಕ್ಷಿಸುತ್ತೇನೆ, ನಾನು ಒಬ್ಬ ಕ್ರೀಡಾ ಅಭಿಮಾನಿ ಎಂದರು. ಮುಂದುವರಿದು ಮಾತನಾಡುತ್ತಾ ಮಾರ್ಚ್ 2ರಂದು ನಡೆಯುವ ಬಂಟ್ವಾಳ ಕಂಬಳಕ್ಕೆ ಬರುವಂತೆ ನೆರೆದ ಜನರಿಗೆ ಬಹಳ ಪ್ರೀತಿಯಿಂದ ಆಮಂತ್ರಣವನ್ನು ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಮಾದುಕೋಡಿ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ವಿಜಯ್ ಗುರೂಜಿ, ನಾರಾಯಣ ಗುರು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಡಗಬೆಳ್ಳೂರು ಗ್ರಾಂ.ಪಂ. ಅಧ್ಯಕ್ಷೆ ರೂಪಶ್ರೀ ನಾರಾಯಣ ನಾಯ್ಕ್, ಉದ್ಯಮಿ ಸತೀಶ್ ಬೆಳ್ಳೂರು ಬೆಟ್ಟು, ಜನಾರ್ಧನ ಕೊಟ್ಟಾರಿ ಬೆಳ್ಳೂರು, ಉದ್ಯಮಿ ಚಂದ್ರಹಾಸ್ ಪಲ್ಲಿಪಾಡಿ, ಬಡಗಬೆಳ್ಳೂರು ಗ್ರಾಂ.ಪಂ. ಮಾಜಿ ಅಧ್ಯಕ್ಷೆ ಪುಷ್ಪ ರಮೇಶ್, ಬೆಳ್ಳೂರು ಕಾವೇಶ್ವರ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಮಯ್ಯ, ಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಾಲಯದ ಅರ್ಚಕ ರಮೇಶ್, ಪ್ರಗತಿಪರ ಕೃಷಿಕ ಹರೀಶ್ ಕೊಪ್ಪಳ, ಆದಿಶಕ್ತಿ ದೇವಸ್ಥಾನದ ಕ್ಷೇತ್ರಾಧಿಕಾರಿ ಸಂದೀಪ್, ವ್ಯಾಘ್ರ ಅರೇಂಜರ್ಸ್ ಗೋಪಿನಾಥ ಶೆಟ್ಟಿ, ವಕೀಲೆ ತೀರ್ಥ ಸೀತಾರಾಮ ಪೂಜಾರಿ ಬಿ.ಸಿ ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಕಿರಣ್ ಬೆಳ್ಳೂರು ಸ್ವಾಗತಿಸಿದರು. ಮನೋಜ್ ಕೈಕಂಬ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಶಶಿಕಿರಣ್ ಪೂಜಾರಿ ಬೆಳ್ಳೂರು ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಮುಕ್ತ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.
ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದು ಕಟೀಲು ಫ್ರೆಂಡ್ಸ್ ಕಟ್ಟೆ ಪ್ರಥಮ ಸ್ಥಾನ, ಉಮಾಮಹೇಶ್ವರೀ ಕಾಪಿಕಾಡ್ ತಂಡ ದ್ವಿತೀಯ ಸ್ಥಾನ, ಶಶಿಕಿರಣ್ ಫ್ರೆಂಡ್ಸ್ ಬೆಳ್ಳೂರು ತೃತೀಯ ಸ್ಥಾನ ಹಾಗೂ ವಾಸುಕಿ ಫ್ರೆಂಡ್ಸ್ ಕಟ್ಟೆ ಚತುರ್ಥ ಸ್ಥಾನ ಪಡೆಯಿತು.
ಕಬಡ್ಡಿ ಪಂದ್ಯಾಟದ ನಿರೂಪಣೆಯನ್ನು ದಿವಾಕರ ಉಪ್ಪಳ ನಡೆಸಿಕೊಟ್ಟರು.