ಮಳಲಿ: ಸೂರ್ಯನಾರಾಯಣ ದೇವರ ಬಾಲಾಲಯ ಪ್ರತಿಷ್ಠೆ
ಕೈಕಂಬ: ಹಲವು ಶತಮಾನಗಳ ಹಿಂದೆ ಅವಸಾನಗೊಂಡಿರುವ ದೇವರಗುಡ್ಡೆ ಮಳಲಿಯ ಮಣೇಲ್ ನ ಶ್ರೀ ಸೂರ್ಯನಾರಾಯಣ ದೇಗುಲದ ಪುನರ್‌ನಿರ್ಮಾಣದ ಅಂಗವಾಗಿ ನ.29ರಂದು ಬೆಳಿಗ್ಗೆ 9.21ಕ್ಕೆ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೇದಮೂರ್ತಿ ಪ್ರಸನ್ನ ಆಚಾರ್ಯ ನಿಟ್ಟೆ ಇವರ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ ನಡೆಯಿತು.
ಅಲ್ಲದೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಅನ್ನಸಂತರ್ಪಣೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ರ ತನಕ ಶ್ರೀರಾಮಾಂಜನೇಯ ಯಕ್ಷಗಾನ ಮಂಡಳಿಯಿಂದ “ಶರಸೇತು ಬಂಧನ” ಹಾಗೂ “ಸುಭದ್ರಾ ಕಲ್ಯಾಣ” ಎಂಬ ಯಕ್ಷಗಾನ ತಾಳಮದ್ದಳೆ, ಸಂಜೆ 6 ಗಂಟೆಯಿಂದ ರಾತ್ರಿ 8ರ ತನಕ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇರುವೈಲು ಇವರಿಂದ ಭಜನಾ ಸಂಕೀರ್ತನೆ ಜರುಗಿತು.
ಸೂರ್ಯನಾರಾಯಣ ಹಾಗೂ ಪರಿವಾರ ದೇವರ ಬಾಲಾಲಯ ಪ್ರತಿಷ್ಠಾಪನೆಗೆ ಗುಡಿಗಳನ್ನು ನಿರ್ಮಿಸಲಾಗಿದೆ.
ಅಲ್ಲದೆ ದೇವಸ್ಥಾನ ಇದ್ದಿರಬಹುದು ಎನ್ನಲಾದ ಸ್ಥಳವನ್ನು ಸಮತಟ್ಟುಗೊಳಿಸಲಾಗಿದೆ. ಈ ವೇಳೆ ದೇಗುಲದ ಅಡಿಪಾಯದ ಚಚ್ಚೌಕಾಕಾರದ ಬೃಹತ್ ಗಾತ್ರದ ಕೆಂಪು ಕಲ್ಲುಗಳು, ಇಟ್ಟಿಗೆಗಳು, ಹೆಂಚುಗಳು, ಹಣತೆಗಳು ಸೇರಿ ಹಲವು ಕುರುಹುಗಳು ಪತ್ತೆಯಾಗಿದೆ.
ಮೂಡಬಿದ್ರೆಯ ಪುತ್ತಿಗೆ ಚೌಟ ಅರಸರ ವಂಶಸ್ಥೆ ರಾಣಿ ಅಬ್ಬಕ್ಕರ ಕಾಲದಲ್ಲಿ ಮಣೇಲ್ ಪೇಂಟೆ ಸುತ್ತಲಿನ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿತ್ತು. ಹದಿಮೂರನೇ ಶತಮಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಆಳುಪ ರಾಜವಂಶದ ದೊರೆ ರಾಜ ಕುಲಶೇಖರ ಈ ಪ್ರದೇಶದಲ್ಲಿ ಗಣಪತಿ ಹಾಗೂ ಪರಿವಾರ ದೇವತೆಗಳ ಸಹಿತ ಸೂರ್ಯನಾರಾಯಣ ದೇವರ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದ್ದು, ಈ ಪ್ರದೇಶ ದೇವರ ಗುಡ್ಡೆ ಎಂದು ಪ್ರಸಿದ್ಧಿ ಪಡೆದಿತ್ತು.
ಇಂತಹ ಪ್ರಾಚೀನ ದೇವಸ್ಥಾನ ಸುಮಾರು ಮುನ್ನೂರರಿಂದ ನಾಲ್ನೂರು ವರ್ಷಗಳ ಹಿಂದೆ ಅವಸಾನ ಗೊಂಡಿರುವ ಸಾಧ್ಯತೆ ಇದೆ, ದೇವಸ್ಥಾನದ ಗರ್ಭಗುಡಿಯ ಪಂಚಾಂಗ, ಅಶ್ವತಮರ, ಶಾಸನಗಳು, ಮೂಲೆಕಲ್ಲುಗಳ ಕುರುಹುಗಳು ಲಭ್ಯವಾಗಿದೆ. ಈಗಾಗಲೇ ದೋಷ ಪರಿಹಾರ ನಿಮಿತ್ತ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ನ.29ರಂದು ಬುಧವಾರ ದೇವರ ಬಾಲಾಲಯ ಪ್ರತಿಷ್ಠಾಪನೆ ನಡೆಯಿತು.