ಕೃಷಿಕರ ಐಪಿ ಪಂಪ್ ಸೆಟ್ ಗಳಿಗೆ ಮೂಲ ಸೌಕರ್ಯವನ್ನು ಹಿಂಪಡೆದ ಸರಕಾರದ ನಿಲುವಿಗೆ ಖಂಡನೆ
ಬಂಟ್ವಾಳ: ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ 2023 ಸೆ.22 ರ ನಂತರ ನೋಂದಾಯಿಸಿದ ಕೃಷಿಕರ ಐಪಿ ಪಂಪ್ ಸೆಟ್ ಗಳಿಗೆ ಮೂಲ ಸೌಕರ್ಯವನ್ನು ನೀಡಿರುವುದನ್ನು ಹಿಂಪಡೆದು ರೈತರು ಸ್ವಯಂ ಕಾರ್ಯನಿರ್ವಹಣೆಯಡಿ ಭರಿಸುವಂತೆ ಆದೇಶ ಹೊರಡಿಸಿರುವುದನ್ನು ಬಂಟ್ವಾಳ ತಾ.ನ ಸಿದ್ದಕಟ್ಟೆ ಸ.ವ್ಯ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಖಂಡಿಸಿದ್ದಾರೆ.

ಈ ಕುರಿತು ರಾಜ್ಯ ಸರಕಾರದ ಇಂಧನ ಸಚಿವ ಕೆ.ಜೆ.ಜಾಜ್೯ ಅವರಿಗೆ ಪತ್ರಬರೆದಿರುವ ಅವರು ಸರಕಾರದ ಈ ನಿರ್ಧಾರ ದೇಶದ ಬೆನ್ನೆಲುಬಾಗಿರುವ ರೈತನಿಗೆ ಬೆನ್ನಿಗೆ ಏಟು ಕೊಟ್ಟಂತಾಗಿದೆಯಲ್ಲದೆ ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆಗೆ ಎಡೆಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಅವಲಂಬಿತ ಕುಟುಂಬಗಳು ಹೆಚ್ಚಾಗಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಯ ಬಹುಪಾಲು ಕೃಷಿ ಕ್ಷೇತ್ರದಿಂದಾಗುತ್ತಿದೆ. ಇತ್ತೀಚಿಗೆ ಅನಾವೃಷ್ಠಿ, ಅತಿವೃಷ್ಠಿ ಹಾಗೂ ನಾನಾ ತರದ ಪ್ರಾಕೃತಿಕ ವಿಕೋಪಗಳಿಂದ ರೈತರು ಬೆಳೆಯುವ ಬೆಳೆಗಳು ಹಾನಿಗೊಳಗಾಗಿರುವ ಹಿನ್ನಲೆಯಲ್ಲಿ ರೈತರು ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ, ರಸಗೊಬ್ಬರದ ಬೆಲೆ ಇನ್ನಿತರ ಕೃಷಿ ಉಪಯೋಗಿ ವಸ್ತುಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಲಾಭ ಪಡೆಯಲು ಕಷ್ಟವಾಗುತ್ತಿದೆ ಹಾಗೂ ಕೃಷಿ ಸಂಬಂಧ ವಿವಿಧ ಬ್ಯಾಂಕುಗಳಿಂದ ಸಾಲವನ್ನು ಪಡೆದಿರುವವರು ಸಾಲವನ್ನು ಮರುಪಾವತಿ ಮಾಡಲಾಗದೆ ಕಂಗಾಲಾಗಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಹಕರ ಪರ ಸೆಟ್ ಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ನೀಡುವುದರೊಂದಿಗೆ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಸರಕಾರದ ವತಿಯಿಂದ ಆಯಾಯಾ ವಿದ್ಯುತ್ ಸರಬರಾಜು ಕಂಪನಿಗಳು ನೀಡುತ್ತಾ ಬಂದಿರುತ್ತದೆ.
ಆದರೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸರಕಾರ 2023 ಸೆ.22 ರ ನಂತರ ನೋಂದಾಯಿಸಿದ ಕೃಷಿಕರ ಐಪಿ ಪಂಪ್ ಸೆಟ್ ಗಳಿಗೆ ಮೂಲ ಸೌಕರ್ಯವನ್ನು ನೀಡುವುದನ್ನು ಹಿಂಪಡೆದು ರೈತರು ಸ್ವಯಂ ಕಾರ್ಯನಿರ್ವಹಣೆಯಡಿ ಭರಿಸುವಂತೆ ಆದೇಶ ಹೊರಡಿಸಿದೆ ಎಂದು ಪ್ರಭು ಪತ್ರದಲ್ಲಿ ತಿಳಿಸಿದ್ದಾರೆ.
ಸರಕಾರದ ಈ ಆದೇಶದಿಂದ ರೈತರ ಬೆನ್ನೆಲುಬು ಮುರಿದಂತಾಗಿದ್ದು, ತಕ್ಷಣದಿಂದ ಸರಕಾರದ ತೀರ್ಮಾನವನ್ನು ಹಿಂಪಡೆದು ಈ ಹಿಂದಿನ ಮಾದರಿಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ರೈತರ ಹಣ ಪಂಪ್ ಸೆಟ್ ಗಳಿಗೆ ಅವಶ್ಯಕವಾದ ಮೂಲ ಸೌಕರ್ಯವನ್ನು ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.