ಬಂಟ್ವಾಳ ಎನ್ ಎಸ್ ಎಸ್ ಸಮಾರೋಪ: ಭಾರತ ವಿಭಿನ್ನ ಭಾಷೆ, ಸಂಸ್ಕೃತಿಯ ದೇಶ: ರೈ
ಬಂಟ್ವಾಳ : ಭಾರತ ವಿಭಿನ್ನ ಭಾಷೆ ಸಂಸ್ಕೃತಿಯಿಂದ ಕೂಡಿದ ದೇಶವಾಗಿದ್ದು, ಇಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಎನ್ ಎಸ್ ಎಸ್ ಶಿಬಿರದಲ್ಲಿ ಅಂತಹ ರಾಷ್ಟ್ರೀಯ ಮನೋಭಾವ ದೊರಕುತ್ತಿದ್ದು ಸಾಮರಸ್ಯ ಜೀವನಕ್ಕೆ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಕೊಯಿಲ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಪರಸ್ಪರ ಅಪನಂಬಿಕೆ ಜನಾಂಗೀಯ ಶೋಷಣೆಗೆ ಒಳಗಾಗದೆ ಯುವಜನತೆ ರಾಷ್ಟ್ರದ ಭಾವೈಕ್ಯತೆ, ಸಾರ್ವಭೌಮತೆಯನ್ನು ಉಳಿಸಿ ಬೆಳೆಸಬೇಕು. ಮಾನವ ಸಂಪನ್ಮೂಲದ ಸದ್ಭಳಕೆ ಸದೃಢಗೊಳಿಸುವ ಹೊಣೆಗಾರಿಕೆ ಯುವಪೀಳಿಗೆಗೆ ಇದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಸಾಮರಸ್ಯ, ಸಹಬಾಳ್ವೆ, ವ್ಯಕ್ತಿತ್ವ ವಿಕಸನ ಅಗತ್ಯವಾಗಿ ನಡೆಯಬೇಕು. ಯುವ ಜನಾಂಗವು ರಾಷ್ಟೀಯ ಸೇವಾ ಯೋಜನೆಯಂತಹ ಸೇವಾ ಮನೋಭಾವದ ಶಿಬಿರಗಳಲ್ಲಿ ತೊಡಗಿಸಿಕೊಂಡರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರೇರಕ ಶಕ್ತಿಯನ್ನು ಒದಗಿಸುತ್ತದೆ ಎಂದರು.
ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಕೊಯಿಲ, ಲಯನ್ಸ್ ಕ್ಲಬ್ ಲೊರೆಟೋ- ಆಗ್ರಾರ್ ಅಧ್ಯಕ್ಷ ಫೆಲಿಕ್ಸ್ ಲೋಬೊ ಅತಿಥಿಗಳಾಗಿ ಭಾಗವಹಿಸಿದರು.
ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ. ಅಧ್ಯಕ್ಷತೆ ವಹಿಸಿದರು. ಲಯನ್ಸ್ ಕ್ಲಬ್ ಲೊರೆಟೋ- ಆಗ್ರಾರ್ ಕಾರ್ಯದರ್ಶಿ ಆಶಾ ಫೆರ್ನಾಂಡಿಸ್, ಉದ್ಯಮಿ ಪಿಯೂಸ್ ಎಲ್. ರೋಡ್ರಿಗಸ್, ಕೊಯಿಲ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಾರತಿ ಕಾರಂತ್, ಲಯನ್ಸ್ ಕ್ಲಬ್ ರಾಯಿ-ಸಿದ್ಧಕಟ್ಟೆ ಕಾರ್ಯದರ್ಶಿ ಅನಿಲ್ ಪ್ರಭು, ಅರಳ ಜಾಸ್ಮಿನ್ ಮಾಲಕ ಕೆ. ಎಚ್. ಖಾದರ್, ಎನ್.ಎಸ್.ಎಸ್. ಘಟಕ ನಾಯಕರಾದ ಪವನ್ ಮತ್ತು ಕೀರ್ತನಾ ಮತ್ತಿತರರು ಉಪಸ್ಥಿತರಿದ್ದರು.
ಸಹ ಶಿಬಿರಾಧಿಕಾರಿಗಳಾದ ಭವಿತಾ ಕೆ., ರೂಪಾ ಮತ್ತು ಮುಸ್ತಾಫ ಮತ್ತಿತರರು ಸಹಕರಿಸಿದರು. ಶಿಬಿರಾರ್ಥಿ ಅಮಿತ್ ಪ್ರಭು ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಕಾರ್ತಿಕ್ ವೈ ಮತ್ತು ಯಜ್ಞ ಶೆಟ್ಟಿ ಅನಿಸಿಕೆ ಅಭಿವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಆಶಯ ಗೀತೆ ಹಾಡಿದರು. ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಲಕ್ಷ್ಮೀನಾರಾಯಣ ಕೆ. ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಶಶಿಧರ್ ಎಸ್. ವಂದಿಸಿದರು. ಕನ್ನಡ ಉಪನ್ಯಾಸಕ ಮನೋಹರ ಶಾಂತಪ್ಪ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.