ನಿವೃತ್ತಿ ಹೊಂದಿದ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ
ಕೈಕಂಬ: ಕುಪ್ಪೆಪದವು, ಕಲ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ೮ ವರ್ಷಗಳಿಂದ ಶಿಕ್ಷಕಿಯಾಗಿ ಹಾಗೂ ೨ ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಮೋಹಿನಿ ಟೀಚರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕುಪ್ಪೆಪದವು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬೂಬಕ್ಕರ್ ಕಲ್ಲಾಡಿ, ನಿವೃತ್ತ ಮುಖ್ಯ ಶಿಕ್ಷಕಿ ಮೇರಿ ವಾಜ್, ಆಚಾರಿಜೋರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಡಿ’ಸೋಜಾ, ಮೂಡಬಿದ್ರಿ ಕಲ್ಲಬೆಟ್ಟು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೆಟ್ ಮೋಹಿನಿ ಟೀಚರ್ ಅವರ ನಿವೃತ್ತ ಜೀವನಕ್ಕೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅರುಣಾ ಭಾಸ್ಕರ್ ಶೆಟ್ಟಿ ಬಾರ್ದಿಲ ಮಾತನಾಡಿ ನಿವೃತ್ತಿ ಹೊಂದುತ್ತಿರುವ ಮೋಹಿನಿ ಟೀಚರ್ ಅವರು ಶಾಲೆಗೆ ನೀಡಿದ ಸೇವೆಗೆ ಕೃತಜ್ಞತೆ ಸಲ್ಲಿಸಿ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಮೋಹಿನಿ ಟೀಚರ್ ಶಾಲೆಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಪರವಾಗಿ ಮೋಹಿನಿ ಟೀಚರ್ ಅವರಿಗೆ ಬಳೆ ತೊಡಿಸಿ, ಶಾಲು ಹೊದೆಸಿ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಹಾಡಿನ ಮೂಲಕ ತಮ್ಮ ಅಚ್ಚುಮೆಚ್ಚಿನ ಶಿಕ್ಷಕಿಗೆ ವಿದಾಯ ಕೋರಿದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಎಂ. ಹನೀಫ್, ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸರಕಾರಿ ಪ್ರೌಢ ಶಾಲೆ ಕಲ್ಲಾಡಿ ಇದರ ಪ್ರಭಾರ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ, ಶಿಕ್ಷಕ ಡಾ. ಪ್ರಸಾದ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಸುಚಿತ್ರಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಭವ್ಯಶ್ರೀ ವಂದಿಸಿದರು.